ಬೆಂಗಳೂರು: ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್ಬಾಸ್ (Bigg Boss) ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿಯೂ ನಟ ಕಿಚ್ಚ ಸುದೀಪ್ ಅವರೇ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈಗಾಗಲೇ ಯಶಸ್ವಿ 10 ಆವೃತ್ತಿಯನ್ನು ಮುಗಿಸಿರುವ ಬಿಗ್ಬಾಸ್ ಶೋ 11ನೇ ಆವೃತ್ತಿಗೆ ಭರ್ಜರಿ ತಯಾರಿ ಮಾಡಿಕೊಂಡಿದೆ.
ಈ ಬಾರಿ ಸ್ವರ್ಗ-ನರಕ ಎಂಬ ಥೀಮ್ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಹೊಸ ಅಧ್ಯಾಯದ ಮೇಲೆ ಜನರು ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.
ಬಿಗ್ಬಾಸ್ ಸೀಸನ್-11ರ ಮೊದಲ ಸ್ಫರ್ಧಿಯಾಗಿ ನಟಿ ಗೌತಮಿ ಜಾಧವ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಬಿಗ್ಬಾಸ್ ಸೀಸನ್-11ರ ಎರಡನೇ ಸ್ಫರ್ಧಿಯಾಗಿ ವಕೀಲ ಜಗದೀಶ್ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಹೇಳಿಕೆ ಹಾಗೂ ಸೋಶಿಯಲ್ ಮೀಡಿಯಾ ಲೈವ್ ವಿಡಿಯೋಗಳ ಮೂಲಕ ಸಾಕಷ್ಟು ಸದ್ದು ಮಾಡಿರುವ ಜಗದೀಶ್ ಕೆಲ ದಿನಗಳ ಹಿಂದೆ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್ರನ್ನು ಹೊರತರೋದಾಗಿ ಹೇಳಿ ಪ್ರತಿಭಟನೆ ನಡೆಸುವ ಮೂಲಕ ಸುದ್ದಿಯಾಗಿದ್ದರು.
ಬಿಗ್ಬಾಸ್ ಸೀಸನ್-11ರ ಮೂರನೇ ಸ್ಫರ್ಧಿಯಾಗಿ ಚೈತ್ರಾ ಕುಂದಾಪುರ ಎಂಟ್ರಿ ಕೊಟ್ಟಿದ್ದಾರೆ. ಹಿಂದೂಪರ ಭಾಷಣಗಳ ಮೂಲಕ ಗುರುತಿಸಿಕೊಂಡಿರುವ ಚೈತ್ರಾ ಕುಂದಾಪುರ 2023ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ವಂಚನೆ ಎಸಗಿ ಜೈಲು ಪಾಲಾಗಿದ್ದರು.
ಬಿಗ್ಬಾಸ್ ಸೀಸನ್-11ರ ನಾಲ್ಕನೇ ಸ್ಫರ್ಧಿಯಾಗಿ ಗೋಲ್ಡ್ ಸುರೇಶ್ ಎಂಬುವವರು ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮೈ ಮೇಲೆ ಸದಾ 2 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣ ಧರಿಸಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿರುವ ಉತ್ತರ ಕರ್ನಾಟಕ ಮೂಲದ ಸುರೇಶ್ ಅವರನ್ನು ಜನ ಗೋಲ್ಡ್ ಸುರೇಶ್ ಎಂದು ಕರೆಯುತ್ತಾರೆ. ಇದಲ್ಲದೆ ಇವರು ಆರ್‌ಎಸ್‌ಎಸ್ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದಾರೆ.