ಧಾರವಾಡ : ಸರಕಾರಿ ಆಸ್ತಿಗಳ ಒತ್ತುವರಿ, ಅತಿಕ್ರಮಣ ತೆರವುಗೊಳಿಸಲು ಮತ್ತು ರಕ್ಷಣೆಗೆ ಸೂಕ್ತ ಆದೇಶ ನೀಡಲು ರಾಜ್ಯ ಸರಕಾರ 2011 ರಲ್ಲಿ ಸ್ಥಾಪಿಸಿರುವ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಇಲ್ಲಿವರೆಗೆ 3,923 ಎಕರೆ ಸರಕಾರಿ ಭೂಮಿಯನ್ನು ಒತ್ತುವರಿ ಆಗಿರುವುದನ್ನು ತೆರವುಗೊಳಿಸಿ, ಮರಳಿ ಸರಕಾರದ ವಶಕ್ಕೆ ಬರುವಂತೆ ಆದೇಶಿಸಲಾಗಿದೆ ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಅಧ್ಯಕ್ಷರಾಗಿರುವ ನ್ಯಾಯಮೂರ್ತಿ ಬಿ.ಎ.ಪಾಟೀಲ ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯ, ಕಂದಾಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಧಾರವಾಡ ಜಿಲ್ಲಾಡಳಿತ ಸಂಯುಕ್ತವಾಗಿ ಆಯೋಜಿಸಿದ್ದ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯ್ದೆಗಳ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿದರು.
ವಿಶೇಷ ನ್ಯಾಯಾಲಯ ಆರಂಭವಾದಾಗಿನಿಂದ ಇಲ್ಲಿವರೆಗೆ 23,646 ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗಿವೆ. ಇವುಗಳ ಪೈಕಿ 18,601 ಪ್ರಕರಣಗಳನ್ನು ಇತ್ಯರ್ಥ ಪಡಿಸಿ ಆದೇಶಿಸಲಾಗಿದೆ. 5037 ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದು, ಇತ್ಯರ್ಥಕ್ಕೆ ಬಾಕಿ ಇವೆ ಎಂದು ಅವರು ತಿಳಿಸಿದರು.
ವಿವಿಧ ಪ್ರಕರಣಗಳಲ್ಲಿ ವಿಚಾರಣೆ ಮಾಡಿ ಒತ್ತುವರಿ, ಅತಿಕ್ರಮಣವಾಗಿ ಸುಮಾರು 3,923 ಎಕರೆ ಸರಕಾರಿ ಭೂಮಿಯನ್ನು ಮರಳಿ ಸರಕಾರದ ವಶಕ್ಕೆ ನೀಡಿ ಆದೇಶಿಸಲಾಗಿದೆ. ಸರಕಾರಿ ಭೂಮಿ ಕಬಳಿಸಿದ್ದ ಒಟ್ಟು 84 ಜನರಿಗೆ 1 ವರ್ಷದ ಶಿಕ್ಷೆ ಹಾಗೂ ದಂಡ ವಿಧಿಸಿ, ಆದೇಶಿಸಲಾಗಿದೆ ಎಂದು ನ್ಯಾಯಮೂರ್ತಿ ಬಿ.ಎ.ಪಾಟೀಲ ಅವರು ಹೇಳಿದರು.