ಸಾಮಾನ್ಯವಾಗಿ ರಸ್ತೆಗಳಲ್ಲಿರುವ ಗುಂಡಿಯಿಂದಾಗಿ ವಾಹನಗಳು ಪಲ್ಟಿ ಹಾಕೋದನ್ನ ನೋಡಿರ್ತೀವಿ. ಇದರಿಂದ ಅಪಘಾತಗಳು ಆಗೋದನ್ನೂ ಕೇಳಿರ್ತೀವಿ. ಆದರೆ, ಇದ್ದಕ್ಕಿದ್ದಂತೆ ಗುಂಡಿ ಬಿದ್ದು, ಅದರಲ್ಲಿ ಗಾಡಿ ಪಾರ್ಕ್ ಆಗೋದನ್ನು ಕೇಳಿರೋಕೆ ಸಾಧ್ಯವಿಲ್ಲ. ಮಹರಾಷ್ಟ್ರದ ಪುಣೆಯಲ್ಲಿ ಇಂತದ್ದೊಂದು ವಿಚಿತ್ರ ಘಟನೆ ನಡೆದು ಹೋಗಿದೆ.
ಪುಣೆ ನಗರದ ಬುದ್ವಾರ್ ಪೇಠ್ ಪ್ರದೇಶದಲ್ಲಿರುವ ಅಂಚೆ ಕಚೇರಿಯ ಆವರಣದಲ್ಲಿ ಟ್ರಕ್ ತಲೆಕೆಳಗಾಗಿ ಗುಂಡಿಗೆ ಬಿದ್ದಿರುವ ಘಟನೆ ವರದಿಯಾಗಿದೆ.
ಇನ್ನು ಇದ್ದಕ್ಕಿದ್ದಂತೆ ಅಂಚೆ ಕಚೇರಿಯ ಆವರಣದಲ್ಲಿ ಬೃಹತ್ ಗುಂಡಿ ಬಿದ್ದಿದ್ದು, ಈ ವೇಳೆ ಅಲ್ಲಿದ್ದ ಈ ವಾಹನವು ಹಿಮ್ಮುಖವಾಗಿ ಚಲಿಸಿ, ನೇರವಾಗಿ ಗುಂಡಿಯೊಳಗೆ ಬಿದ್ದಿದೆ. ಈ ಟ್ರಕ್ ಪುಣೆ ಮುನ್ಸಿಪಲ್ ಕಾರ್ಪೊರೇಷನ್‌ಗೆ ಸೇರಿದ್ದು ಎನ್ನಲಾಗಿದ್ದು, ಒಳಚರಂಡಿ ಸ್ವಚ್ಛತಾ ಕಾರ್ಯಕ್ಕಾಗಿ ಅಲ್ಲಿಗೆ ಬಂದಿತ್ತು..
ಟ್ರಕ್ ಗುಂಡಿಯೊಳಕ್ಕೆ ಬೀಳುತ್ತಿದ್ದಂತೆ ಒಳಗಿದ್ದ ಚಾಲಕ ವಾಹನದಿಂದ ಜಿಗಿದಿದ್ದಾನೆ. ಹಾಗಾಗಿ ಯಾವುದೇ ಗಾಯಗಳು ವರದಿಯಾಗಿಲ್ಲ. ಬಳಿಕ ಟ್ರಕ್ ಅನ್ನು ಹೊರತೆಗೆಯುವ ಪ್ರಯತ್ನ ನಡೆದಿದೆ.
ಮೂಲಗಳ ಪ್ರಕಾರ ಇಲ್ಲಿನ ನಗರದ ಅಂಚೆ ಕಚೇರಿ ಆವರಣದಲ್ಲಿ ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಂಚೆ ಕಚೇರಿ ಆವರಣದಲ್ಲಿ ಗುಂಡಿ ಬೀಳುವ ಹಾಗೂ ಗುಂಡಿಯೊಳಗೆ ಟ್ರಕ್ ಬೀಳುವ ದೃಶ್ಯಗಳು ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲೂ ಇದಕ್ಕೆ ಸಂಬಂಧಿಸಿದ ಫೋಟೊ ಹಾಗೂ ವಿಡಿಯೋಗಳು ಹರಿದಾಡುತ್ತಿವೆ.
ಈ ಘಟನೆಯಾದ ನಂತರ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಯಿತು. ಬಳಿಕ ಪುಣೆ ಮಹಾನಗರ ಪಾಲಿಕೆಯ (ಪಿಎಂಸಿ) ಅಗ್ನಿಶಾಮಕ ದಳ ಮತ್ತು ವಾರ್ಡ್ ಕಚೇರಿಯ ಅಧಿಕಾರಿಗಳು, ವಲಯ 5ರ ಉಪ ಆಯುಕ್ತ ಡಾ.ಚೇತನಾ ಕೆರೂರೆ, ಇಲಾಖಾ ಮುಖ್ಯಸ್ಥ ಅನಿರುದ್ಧ ಸೇರಿದಂತೆ ಅಗ್ನಿಶಾಮಕ ಅಧಿಕಾರಿ ಕಮಲೇಶ್ ಚೌಧರಿ ಮತ್ತು ಇತರ ಸಂಬಂಧಪಟ್ಟ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿದರು. ಕ್ರೇನ್ ಆಪರೇಟರ್‌ಗಳು ಹಾಗೂ ಇತರ ಇಲಾಖೆಯ ಜಂಟಿ ಕಾರ್ಯಾಚರಣೆಯಲ್ಲಿ ಟ್ರಕ್ ಅನ್ನು ಸುರಕ್ಷಿತವಾಗಿ ಮೇಲೆತ್ತಲಾಗಿದೆ ಎಂದು ವರದಿಯಾಗಿದೆ.
ಅಂದಾಜು 20 ಅಡಿ ಆಳದ ಗುಂಡಿಗೆ ಬಿದ್ದಿದ್ದ 15 ಟನ್ ತೂಕದ ಈ ವಾಹನವನ್ನು ಹೊರತರಲು ಎರಡು ಕ್ರೇನ್‌ಗಳನ್ನು ಸ್ಥಳಕ್ಕೆ ಕರೆಸಲಾಯಿತು. ಸಿಟಿ ಪೋಸ್ಟ್ ಆಫೀಸ್ ಪ್ರದೇಶದಲ್ಲಿ ದಟ್ಟಣೆಯಿಂದಾಗಿ, ಪಿಎಂಸಿಯ ಅಗ್ನಿಶಾಮಕ ದಳದ ರೆಸ್ಕ್ಯೂ ವ್ಯಾನ್ ಟ್ರಾಫಿಕ್ ಪೊಲೀಸರ ಸಹಾಯದಿಂದ ಕ್ರೇನ್‌ಗಳನ್ನು ಸ್ಥಳಕ್ಕೆ ಕೊಂಡೊಯ್ದು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು ಎನ್ನಲಾಗಿದೆ.
ಇನ್ನು ಈ ವಿಡಿಯೋ ಹರಿದಾಡಿದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಬಗೆಬಗೆಯ ಕಾಮೆಂಟ್ ಮಾಡಿದ್ದಾರೆ. ಕೆಲವರು ಈ ಟ್ರಕ್ ಎಷ್ಟು ಸೊಗಸಾಗಿ ಪಾರ್ಕ್ ಆಗಿದೆ ಎಂದು ಹಾಸ್ಯ ಕೂಡ ಮಾಡಿದ್ದಾರೆ. ಇನ್ನೂ ಕೆಲವರು ಪಾರ್ಕಿಂಗ್ ಮಾಡೋಕೆ ಬೇರೆ ಜಾಗ ಸಿಗಲಿಲ್ವಾ? ಎಂದೂ ನಕ್ಕಿದ್ದಾರೆ.
ನಾವು ಪುಣೆಯನ್ನು ಉತ್ತಮ ಅಭಿವೃದ್ಧಿ ಹೊಂದಿದ ನಗರವಾಗಿ ನೋಡಬೇಕೆಂದಿದ್ದೇವೆ. ಆದರೆ ಅಲ್ಲಿನ ರಾಜಕಾರಣಿಗಳು ಇನ್ನೂ ಅಭಿವೃದ್ಧಿ ಹೊಂದಿಲ್ಲ. ಅವರು ದೂರದೃಷ್ಟಿಯೂ ಹೊಂದಿಲ್ಲ ಎನ್ನುವುದು ಈ ಘಟನೆಯಿಂದ ಸಾಬೀತಾಗಿದೆ ಎಂದು ಲೇವಡಿ ಕೂಡ ಮಾಡಿದ್ದಾರೆ.