Breaking News

ಮಕ್ಕಳಿಗೆ ‘ರಾಷ್ಟ್ರಪ್ರೇಮ’ದ ಪಾಠ

Spread the love

ಮೂಡಲಗಿ: ತಾಲ್ಲೂಕಿನ ಯಾದವಾಡದ ಸುಧೀಂದ್ರ ಇಟ್ನಾಳ ಭಾರತೀಯ ಸೇನೆಯಲ್ಲಿ 34 ವರ್ಷ ಸೇವೆ ಸಲ್ಲಿಸಿ, ಬ್ರಿಗೇಡಿಯರ್‌ ಆಗಿ ನಿವೃತ್ತಿ ಹೊಂದಿದ್ದಾರೆ. ಆದರೆ, ನಿವೃತ್ತಿ ನಂತರ ಮನೆಯಲ್ಲಿ ಕೈಕಟ್ಟಿ ಕುಳಿತಿಲ್ಲ. ಬದಲಿಗೆ ಸ್ವಯಂ ಪ್ರೇರಣೆಯಿಂದ ಶಾಲೆ-ಕಾಲೇಜುಗಳಿಗೆ ಹೋಗಿ, ಶಿಕ್ಷಕರು ಹಾಗೂ  ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ.

ರಾಷ್ಟ್ರಾಭಿಮಾನ ಮತ್ತು ಬದುಕಿನಲ್ಲಿ ಶಿಸ್ತು ಮೂಡಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.

ಇದಕ್ಕಾಗಿ ಯಾವುದೇ ಶುಲ್ಕ ಪಡೆಯುತ್ತಿಲ್ಲ. ನಿಸ್ವಾರ್ಥ ಮನೋಭಾವದಿಂದ ಉಚಿತವಾಗಿ ಇಂಥದ್ದೊಂದು ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 

ಕರ್ನಾಟಕ ಮಾತ್ರವಲ್ಲದೆ; ವಿವಿಧ ರಾಜ್ಯಗಳ ಶಾಲೆ, ಕಾಲೇಜುಗಳಿಗೆ ತೆರಳಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಪಾಠ ಮಾಡಿ, ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ, ಪರಿಸರ ಸಂರಕ್ಷಣೆ, ಸಾಮಾಜಿಕ ಜವಾಬ್ದಾರಿ ಬಗ್ಗೆ ತಿಳಿಸುತ್ತಾರೆ. ರಾಷ್ಟ್ರಭಕ್ತಿ, ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಪ್ರೇರಣೆ ತುಂಬುತ್ತಾರೆ. ಕಾರ್ಗಿಲ್‌ ಯುದ್ಧವೂ ಸೇರಿದಂತೆ 1948ರಿಂದ 1999ರವರೆಗೆ ವಿವಿಧ ಯುದ್ಧಗಳಲ್ಲಿ ಸೈನಿಕರು ಮೆರೆದ ಸಾಹಸಗಾಥೆ ಬಿಚ್ಚಿಡುತ್ತಾರೆ.

‘ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿದ್ದರೆ ಹಾಗೂ ಆತ್ಮವಿಶ್ವಾಸವಿದ್ದರೆ, ಮಕ್ಕಳು ಏನೆಲ್ಲ ಸಾಧಿಸಬಹುದು. ಸೇನೆಗೆ ಸೇರುವ ಪ್ರತಿಯೊಬ್ಬರಿಗೂ ಇದನ್ನು ಹೇಳಿಕೊಡಲಾಗುತ್ತದೆ. ವಿದ್ಯಾರ್ಥಿಗಳಲ್ಲೂ ಅಂಥ ಸಾಮರ್ಥ್ಯವು ಬರಲೆಂದು ಕಳೆದ ಎರಡೂವರೆ ವರ್ಷದಿಂದ ‘ಸದೃಢ ರಾಷ್ಟ್ರಕ್ಕಾಗಿ ಸದೃಢ ಮಕ್ಕಳನ್ನು ಸಿದ್ಧಗೊಳಿಸುವ ಅಭಿಯಾನ ಆರಂಭಿಸಿದ್ದೇನೆ’ ಎಂದು ಸುಧೀಂದ್ರ ಇಟ್ನಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ಈವರೆಗೆ 40ಕ್ಕೂ ಅಧಿಕ ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ಭೇಟಿ ನೀಡಿ, 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದಕ್ಕೆ ಪಾಠ ಮಾಡಿದ ಹೆಗ್ಗಳಿಕೆ ಅವರದ್ದು.

ವಿವಿಧ ಹುದ್ದೆ ನಿಭಾಯಿಸಿದ ಹಿರಿಮೆ: 1ರಿಂದ 7ನೇ ತರಗತಿಯವರೆಗೆ ಯಾದವಾಡದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲೇ ಓದಿದ ಸುಧೀಂದ್ರ ಬಿ.ಇ (ಮೆಕ್ಯಾನಿಕಲ್‌) ಪದವೀಧರರು. 1987ರಲ್ಲಿ ಭಾರತೀಯ ಸೇನೆ ಸೇರಿದ ಅವರು, ಲೆಫ್ಟಿನೆಂಟ್‌, ಕ್ಯಾಪ್ಟನ್‌, ಮೇಜರ್, ಲೆಫ್ಟಿನೆಂಟ್‌ ಕರ್ನಲ್‌, ಕರ್ನಲ್‌, ಬ್ರಿಗೇಡಿಯರ್‌ ಹೀಗೆ… ವಿವಿಧ ಹುದ್ದೆ ನಿಭಾಯಿಸಿ 2021ರಲ್ಲಿ ನಿವೃತ್ತಿಯಾಗಿದ್ದಾರೆ. ಭಾರತದ ಪ್ರತಿನಿಧಿಯಾಗಿ ಆಸ್ಟೇಲಿಯಾ, ಸ್ವಿಜರ್‌ಲೆಂಡ್‌, ಜೆಸ್ಲೋವಿಕಿಯಾ, ಅಮೆರಿಕಾದಲ್ಲಿ ಕೆಲಸ ಮಾಡಿದ್ದಾರೆ.

‘ಸೇವಾನಿವೃತ್ತಿ ನಂತರ ಏನು ಮಾಡಬೇಕು ಎಂಬ ಪ್ರಶ್ನೆ ಕಾಡಿತ್ತು. ಅದಕ್ಕಾಗಿ ರಾಷ್ಟ್ರ ನಿರ್ಮಾಣದ ಪರಿಕಲ್ಪನೆಯನ್ನು ಮಕ್ಕಳಲ್ಲಿ ಬೆಳೆಸುವ ಉದ್ದೇಶದಿಂದ ಅಭಿಯಾನ ಆರಂಭಿಸಿದೆ. ಇದರಿಂದ ಪ್ರೌಢಶಾಲೆ ಮಕ್ಕಳಿಗೆ ಹೆಚ್ಚು ಅನುಕೂಲವಾಗಿದೆ. ಸಮಯ ಹೊಂದಾಣಿಕೆ ಮಾಡಿಕೊಂಡು, ನಿರಂತರವಾಗಿ ಈ ಕೆಲಸ ಮಾಡುತ್ತಿರುವುದು ಖುಷಿ ತಂದುಕೊಟ್ಟಿದೆ’ ಎಂದು ಸುಧೀಂದ್ರ ಪ್ರತಿಕ್ರಿಯಿಸಿದರು.


Spread the love

About Laxminews 24x7

Check Also

ಕೊನೆಗೂ ಬೆಳಗಾವಿಗರ ಬಹುಪ್ರತೀಕ್ಷಿತ ನೂತನವಾಗಿ ಮಾರ್ಡನ್ ಮಾರ್ಕೆಟಾಗಿ ರೂಪುಗೊಂಡ ಕಲಾಮಂದಿರ

Spread the love ಕೊನೆಗೂ ಬೆಳಗಾವಿಗರ ಬಹುಪ್ರತೀಕ್ಷಿತ ನೂತನವಾಗಿ ಮಾರ್ಡನ್ ಮಾರ್ಕೆಟಾಗಿ ರೂಪುಗೊಂಡ ಕಲಾಮಂದಿರದ ಲೋಕಾರ್ಪಣೆಗೆ ಮೂಹೂರ್ತ ಫಿಕ್ಸ್ ಆಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ