ಶಕ್ತಿನಗರ (ರಾಯಚೂರು ಜಿಲ್ಲೆ): ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗಿದ್ದರಿಂದ ಜಲವಿದ್ಯುತ್ ಉತ್ಪಾದನೆ ಪ್ರಮಾಣ ಹೆಚ್ಚಿಸಿದ ಪರಿಣಾಮ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್) ಆರು ಘಟಕಗಳಲ್ಲಿ ಹಾಗೂ ಯರಮರಸ್ ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ವೈಟಿಪಿಎಸ್) ಎರಡು ಘಟಕಗಳಲ್ಲಿ ತಾತ್ಕಲಿಕವಾಗಿ ವಿದ್ಯುತ್ ಉತ್ಪಾದನೆ ನಿಲ್ಲಿಸಲಾಗಿದೆ.
ಬಹುತೇಕ ಜಲಾಶಯಗಳು ಭರ್ತಿ ಹಂತಕ್ಕೆ ತಲುಪಿದ್ದರಿಂದ ಜಲವಿದ್ಯುತ್ ಕೇಂದ್ರಗಳು ಕಾರ್ಯಾರಂಭಿಸಿವೆ. ಶಾಖೋತ್ಪನ್ನ ಘಟಕಗಳ ಉತ್ಪಾದನೆ ತಾತ್ಕಲಿಕವಾಗಿ ಬಂದ್ ಮಾಡಲು ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ಮುಂದಾಗಿದೆ. ಮತ್ತೊಂದೆಡೆ ಪವನ ಮತ್ತು ಸೌರ ವಿದ್ಯುತ್ ಲಭ್ಯತೆಯೂ ಹೆಚ್ಚಾಗಿದ್ದರಿಂದ ಶಾಖೋತ್ಪನ್ನ ಘಟಕಗಳು ನಿರಾಳವಾಗಿವೆ. ಸದ್ಯ ಆರ್‌ಟಿಪಿಎಸ್‌ನ ಎರಡು ಘಟಕಗಳಲ್ಲಿ ಮಾತ್ರ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
‘ವಾರ್ಷಿಕ ನಿರ್ವಹಣೆ ನಿಮಿತ್ತ 210 ಮೆಗಾವಾಟ್ ಸಾಮರ್ಥ್ಯದ 6ನೇ ಘಟಕದಲ್ಲಿ ಉತ್ಪಾದನೆ ಬಂದ್ ಮಾಡಲಾಗಿತ್ತು. ಇದೀಗ 1, 2, 3, 4 ಮತ್ತು 7ನೇ ಘಟಕಗಳಲ್ಲಿ ತಾತ್ಕಾಲಿಕವಾಗಿ ಉತ್ಪಾದನೆ ಬಂದ್ ಮಾಡಿದ್ದೇವೆ’ ಎಂದು ಆರ್‌ಟಿಪಿಎಸ್ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಪಿ.ನಾರಾಯಣ ಗಜಕೋಶ ತಿಳಿಸಿದರು.