ಹುಕ್ಕೇರಿ: ಉತ್ತರ ಕರ್ನಾಟಕದಲ್ಲಿ ಮಠ -ಮಾನ್ಯಗಳು ಶೈಕ್ಷಣಿಕ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿವೆ. ಈ ನಿಟ್ಟಿನಲ್ಲಿ ಔಜೀಕರ ಜ್ಞಾನಯೋಗಾಶ್ರಮವು ಶಿಕ್ಷಣ ಸಂಸ್ಥೆ ಆರಂಭಿಸಲು ಮುಂದಾದಲ್ಲಿ ಎಲ್ಲ ರೀತಿಯ ಸಹಾಯ, ಸಹಕಾರ ನೀಡಲು ಸಿದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಪಟ್ಟಣದ ಹೊರವಲಯದ ಕ್ಯಾರಗುಡ್ ಬಳಿಯ ಔಜೀಕರ ಜ್ಞಾನಯೋಗಾಶ್ರಮದಲ್ಲಿ ಔಜೀಕರ ಮಹಾರಾಜರ ಹಾಗೂ ಜಗನ್ನಾಥ ಮಹಾರಾಜರ ಸ್ಮರಣಾರ್ಥ ಮಂಗಳವಾರ ಏರ್ಪಡಿಸಿದ್ದ ಸಪ್ತಾಹ ಹಾಗೂ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಧಾರ್ಮಿಕ ಶ್ರದ್ಧಾ ಕೇಂದ್ರಗಳು ಧರ್ಮ ಪ್ರಸಾರದ ಜತೆ ಶೈಕ್ಷಣಿಕ ಚಟುವಟಿಕೆ ನಡೆಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಸತ್ಕಾರ: ಇದೇ ವೇಳೆ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಸತ್ಕರಿಸಲಾಯಿತು.
ಆಶ್ರಮದ ಮುಖ್ಯಸ್ಥ ಮಲ್ಲೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.
ಇಂಚಗೇರಿ ಮಠದ ರೇವಣಸಿದ್ದೇಶ್ವರ ಮಹಾರಾಜರು, ಝಂಗಟಿಹಾಳ ಚಂದ್ರಶೇಖರ ಸ್ವಾಮೀಜಿ, ಯರನಾಳ ಬ್ರಹ್ಮಾನಂದ ಸ್ವಾಮೀಜಿ, ಘೋಡಗೇರಿ ಮಲ್ಲಯ್ಯ ಸ್ವಾಮೀಜಿ, ಅಭಿನವ ಮಂಜುನಾಥ ಸ್ವಾಮೀಜಿ, ಶಾಸಕ ದುರ್ಯೋದನ ಐಹೊಳೆ, ಮಾಜಿ ಸಚಿವ ಶಶಿಕಾಂತ ನಾಯಿಕ, ಬೆಲ್ಲದ ಬಾಗೇವಾಡಿ ಬ್ಯಾಂಕ್ ಅಧ್ಯಕ್ಷ ಪವನ್ ಕತ್ತಿ, ಮಹಾವೀರ ಉದ್ಯೋಗ ಸಮೂಹ ಸಂಸ್ಥೆಯ ಚೇರಮನ್ ಮಹಾವೀರ ನಿಲಜಗಿ, ಕೆ.ಎಂ.ಎಫ್. ನಿರ್ದೇಶಕ ರಾಯಪ್ಪ ಡೂಗ, ಪುರಸಭೆ ಸದಸ್ಯ ಅಣ್ಣಾಗೌಡ ಪಾಟೀಲ, ಮುಖಂಡರಾದ ದುಂಡಪ್ಪ ಬೆಂಡವಾಡೆ, ಸಂಜು ಪಾಟೀಲ, ಮತ್ತಿತರರು ಪಾಲ್ಗೊಂಡಿದ್ದರು