ಖಾನಾಪುರ(ಬೆಳಗಾವಿ ಜಿಲ್ಲೆ): ‘ಒಂದು ಮಗು ಸಾಧನೆಯತ್ತ ಹೆಜ್ಜೆಹಾಕಲು ಉತ್ತಮ ಆರೋಗ್ಯ ಹಾಗೂ ಶಿಕ್ಷಣ ಅಗತ್ಯ. ರಾಜ್ಯದಲ್ಲಿ ಆದ್ಯತೆ ಮೇರೆಗೆ ಆರೋಗ್ಯ ವ್ಯವಸ್ಥೆ ಬಲವರ್ಧನೆಗೆ ಕ್ರಮ ವಹಿಸುತ್ತಿದ್ದೇವೆ’ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.
ಇಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನಿರ್ಮಿಸಿದ 60 ಹಾಸಿಗೆಗಳ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಬುಧವಾರ ಉದ್ಘಾಟಿಸಿ ಹಾಗೂ ನಬಾರ್ಡ್ ಯೋಜನೆಯಡಿ 100 ಹಾಸಿಗೆಗಳ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಸಮಾಜದ ಆರೋಗ್ಯ ಉತ್ತಮವಾಗಿ ಇರಬೇಕಾದರೆ, ತಾಯಿ ಮತ್ತು ಮಗುವಿನ ಆರೋಗ್ಯ ಮೊದಲು ಉತ್ತಮವಾಗಿರಬೇಕು. ಗರ್ಭದಲ್ಲಿನ ಭ್ರೂಣ ಮತ್ತು ತಾಯಿ ಆರೋಗ್ಯ ಪರಸ್ಪರ ಅವಲಂಬಿಸಿವೆ. ಹಾಗಾಗಿ ಗರ್ಭಿಣಿಯರು ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಬೇಕು. ಪೌಷ್ಟಿಕ ಆಹಾರ ಸೇವಿಸಬೇಕು. ಭ್ರೂಣಾವಸ್ಥೆಯಲ್ಲೇ ಮಗುವಿನ ಆರೋಗ್ಯಕ್ಕೆ ಒತ್ತು ಕೊಡಬೇಕು’ ಎಂದರು.
‘₹15 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಈಗ ಉದ್ಘಾಟನೆಯಾಗಿದೆ. ಇದಕ್ಕೆ ಅಗತ್ಯವಿರುವ ವೈದ್ಯಕೀಯ ಉಪಕರಣ, ಮೂಲಸೌಕರ್ಯ ಒದಗಿಸಲಾಗುವುದು. ಜತೆಗೆ, ಜನರಿಗೆ ಉತ್ತಮ ಸೇವೆ ಕಲ್ಪಿಸಲು ವೈದ್ಯರು ಹಾಗೂ ಸಿಬ್ಬಂದಿ ನೇಮಿಸಲಾಗುವುದು’ ಎಂದು ಭರವಸೆ ನೀಡಿದರು.