ಹಿರೇಬಾಗೇವಾಡಿ: ಬೆಳಗಾವಿ-ಕಿತ್ತೂರು-ಧಾರವಾಡ ರೈಲು ಮಾರ್ಗದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.
ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿ ಇಲ್ಲಿನ ಪಡಿಬಸವೇಶ್ವರ ದೇವಸ್ಥಾನದಲ್ಲಿ ಗ್ರಾಮಸ್ಥರ ವಿವಿಧ ಬೇಡಿಕೆಗಳ ಮನವಿ ಸ್ವೀಕರಿಸಿ ಮಾತನಾಡಿದರು.
ಹಿರೇಬಾಗೇವಾಡಿ ಮಾರ್ಗವಾಗಿ ಧಾರವಾಡಕ್ಕೆ ಹೊಸ ರೈಲು ಮಾರ್ಗ ನಿರ್ಮಾಣ ಕಾರ್ಯದಲ್ಲಿ ಯಾವುದೇ ಅಡೆತಡೆಗಳಿಲ್ಲ. ರೈತರು ಜಮೀನು ನೀಡಲು ಮುಂದಾಗಿದ್ದು, ಅದರಿಂದ ಯಾವುದೇ ರೈತರಿಗೆ ಸಮಸ್ಯೆಗಳಾಗದಂತೆ ಕ್ರಮ ಕೈಗೊಳ್ಳಲಾಗುವುದು. ಭಕ್ತರ ಬೇಡಿಕೆಗನುಸಾರವಾಗಿ ಸವದತ್ತಿಯ ಯಲ್ಲಮ್ಮನ ಗುಡ್ಡದ ವರೆಗೆ ಹೊಸ ರೈಲು ಮಾರ್ಗದ ಬಗ್ಗೆ ಇತ್ತೀಚಿಗೆ ಕೇಂದ್ರ ರೈಲ್ವೆ ಸಚಿವರೊಂದಿಗೆ ಮಾತನಾಡಿದ್ದು, ಸಂಬಂಧಿತ ಅಧಿಕಾರಿಗಳೊಡನೆ ಸರ್ವೇ ಕೂಡ ಮಾಡಲು ಚರ್ಚಿಸಲಾಗಿದೆ ಎಂದರು.
ಇಲ್ಲಿಯ ಬಸವ ವೃತ್ತದ ಬಳಿಯ ಹೆದ್ದಾರಿಗೆ ಕೆಳ ಸೇತುವೆ ನಿರ್ಮಾಣ ಮಾಡಬೇಕೆಂದು ಇಲ್ಲಿನ ಜಿವಿವಿ ಸಂಘದ ಶಾಲಾ ಶಿಕ್ಷಕರು ಮತ್ತು ಗ್ರಾಮಸ್ಥರು ಸಂಸದರಿಗೆ ಮನವಿ ಮಾಡಿಕೊಂಡರು.
ಸ್ಥಳದಲ್ಲಿದ್ದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆ ಮಾತನಾಡಿದ ಸಂಸದರು, ಶೀಘ್ರವೇ ಸಾರ್ವಜನಿಕರ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.