ಮುಧೋಳ: ಘಟಪ್ರಭಾ ನದಿ ಪ್ರವಾಹದಿಂದ ಹಾನಿಗೊಳಗಾದ ಸಂತ್ರಸ್ತರು ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಸೋಮವಾರ ನಡೆದ ಪ್ರತಿಭಟನೆ ಹಾಗೂ ಮುಧೋಳ ಬಂದ್ ಯಶಸ್ವಿಯಾಗಿ ನಡೆಯಿತು.
ಬೆಳಿಗ್ಗೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ರಾಣಾ ಪ್ರತಾಪಸಿಂಹ ವೃತ್ತಕ್ಕೆ ಆಗಮಿಸಿ ವಿಜಯಪುರ- ಬೆಳಗಾವಿ ರಾಜ್ಯ ಹೆದ್ದಾರಿ ಸಂಪರ್ಕ ಸ್ಥಗಿತಗೊಳಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತ ಕಾಂಬಳೆ ಮಾತನಾಡಿ, ಜನಪ್ರತಿನಿಧಿಗಳಾದವರು ಜನರ ಸಮಸ್ಯೆ ಆಲಿಸುವ ಕೆಲಸ ಮಾಡಬೇಕು. ನೆರೆಯಲ್ಲಿ ಮನೆ, ಬೆಳೆ ಕಳೆದುಕೊಂಡ ಸಂತ್ರಸ್ತರಿಗೆ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ನೀಡುವ ಪರಿಹಾರ ಮೊತ್ತವನ್ನು ಪರಿಷ್ಕರಣೆ ಮಾಡಬೇಕು. ಓಬೆರಾಯನ ಕಾಲದ ಮಿತಿಯನ್ನು ತೆಗೆದುಹಾಕಬೇಕು. ಹೆಚ್ಚಿನ ಪರಿಹಾರ ಒದಗಿಸಿ ಸಂತ್ರಸ್ತರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.