ಧಾರವಾಡ, : ಧಾರವಾಡ ಕೆಐಎಡಿಬಿ(KIADB) ಕಚೇರಿ ಅಂದರೆ ಅಲ್ಲಿ ಅಕ್ರಮಗಳದ್ದೇ ಪಾರುಪತ್ಯ. ಕಳೆದ ವರ್ಷ ಇಲಾಖೆಯ ವಿಶೇಷ ಭೂ ಸ್ವಾಧೀನ ಅಧಿಕಾರಿಯಾಗಿದ್ದ ವ್ಹಿ. ಡಿ. ಸಜ್ಜನ್ ತಮ್ಮ ನಿವೃತ್ತಿಯ ಕೊನೆಯ ದಿನವೇ 30 ಕೋಟಿ ರೂಪಾಯಿ ಹಣವನ್ನು ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿತ್ತು.
ಅದಕ್ಕೂ ಮುನ್ನ 20 ಕೋಟಿ ರೂ. ಡಬಲ್ ಪೇಮೆಂಟ್ ಹಗರಣವೂ ನಡೆದು, ಅದರಲ್ಲಿ ಸಜ್ಜನ್ ಮೊದಲನೇ ಆರೋಪಿ ಆಗಿ, ಜೈಲು ಕೂಡ ಕಂಡು ಬಂದಿದ್ದರು. ಡಬಲ್ ಪೇಮೆಂಟ್ ಕುರಿತು ಸಿಐಡಿ ತನಿಖೆಯ ಚಾರ್ಜ್ ಶೀಟ್ನಲ್ಲಿ ಒಂದೇ ದಿನದಲ್ಲಿ 30 ಕೋಟಿ ರೂಪಾಯಿ ಹಣ ವರ್ಗಾವಣೆ ಬಗ್ಗೆ ಆರೋಪಿಸಲಾಗಿತ್ತು.
ಇದೇ ವೇಳೆ ಸಿಐಡಿ ತನಿಖೆಯಲ್ಲಿ ಸಾಕಷ್ಟು ಲೋಪಗಳಾಗಿವೆ ಎನ್ನುವ ಆರೋಪವೂ ಕೇಳಿ ಬಂದಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ED) ಎಂಟ್ರಿ ಕೊಟ್ಟಿದೆ. ಇಂದು ಬೆಂಗಳೂರಿನಿಂದ ಆಗಮಿಸಿದ ಇಡಿ ಅಧಿಕಾರಿಗಳ ತಂಡ, ಕೆಐಎಡಿಬಿ ಕಚೇರಿಗೆ ದಾಳಿ ಮಾಡಿ ತನಿಖೆ ಆರಂಭಿಸಿದೆ.