ಧಾರವಾಡ: ‘ಸರ್ಕಾರಿ ನೌಕರರು ಇಂದು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ನೌಕರರ ಮೇಲಿನ ಒತ್ತಡ ಕಡಿಮೆ ಮಾಡಬೇಕು’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದ ಗೌರಮ್ಮ ಹಿರೇಮಠ (ರಪಾಟಿ) ಕಲ್ಯಾಣ ಮಂಟಪದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ವತಿಯಿಂದ ಭಾನುವಾರ ಆಯೋಜಿಸಿದ್ದ 2023-24ನೇ ಸಾಲಿನ ಪ್ರತಿಭಾ ಪುರಸ್ಕಾರ, ಸದಸ್ಯರ ಸಾಮಾನ್ಯ ಸಭೆ ಮತ್ತು 7ನೇ ವೇತನ ಆಯೋಗ ಜಾರಿಗೆ ಸಹಕರಿಸಿದ ಶಾಸಕರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಸರ್ಕಾರ ಮತ್ತು ಸಾರ್ವಜನಿಕರ ಮಧ್ಯದ ಕೊಂಡಿಯಾಗಿ ಸರ್ಕಾರಿ ನೌಕರರು ಕೆಲಸ ಮಾಡುತ್ತಾರೆ. ಸರ್ಕಾರದ ವರ್ಚಸ್ಸು ನೌಕರನ ಕಾರ್ಯಕ್ಷಮತೆ ಮೇಲೆ ನಿಂತಿರುತ್ತದೆ. ಪ್ರತಿಯೊಬ್ಬ ನೌಕರ ಸರ್ಕಾರದ ರಾಯಭಾರಿಯಂತೆ ಕರ್ತವ್ಯ ನಿರ್ವಹಿಸಿ, ಸರ್ಕಾರದ ಬಗ್ಗೆ ಸದಭಿಪ್ರಾಯ ಮೂಡಿಸಬೇಕು’ ಎಂದು ಸಲಹೆ ನೀಡಿದರು.