ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದ ಕಾರಣದಿಂದ ಇಲ್ಲಿಯ ವರೆಗೆ ಒಟ್ಟು 167.73 ಕೋ.ರೂ. ನಷ್ಟವಾಗಿದೆ. ಪ್ರಾಕೃತಿಕ ವಿಕೋಪ ನಿರ್ವಹಣೆ ಬಳಕೆಗಾಗಿ ಜಿಲ್ಲಾ ವಿಪತ್ತು ಪರಿಹಾರ ನಿಧಿಯಲ್ಲಿ 14.22 ಕೋ.ರೂ. ಹಾಗೂ ತಾಲೂಕುಗಳಲ್ಲಿ ಒಟ್ಟು 4.14 ಕೋ.ರೂ.
ಲಭ್ಯವಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾದ್ಯಂತ ಮಳೆ ಹಾಗೂ ನೆರೆಹಾನಿಯಿಂದ ತತ್ತರಿಸಿದ ವಿವಿಧ ಪ್ರದೇಶ ಗಳಿಗೆ ಶುಕ್ರವಾರ ಭೇಟಿ ನೀಡಿ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಈವರೆಗೆ ಒಟ್ಟು 11 ಮಂದಿ ಸಾವನ್ನಪ್ಪಿದ್ದು, 9 ಮಂದಿ ಗಾಯಗೊಂಡಿದ್ದಾರೆ. 154 ಮನೆಗಳು ಸಂಪೂರ್ಣ ಹಾಗೂ 484 ಭಾಗಶಃ ಹಾನಿಗೀಡಾಗಿವೆ. 18 ಪ್ರಾಣಿಗಳು ಮೃತಪಟ್ಟಿವೆ.
ಪಂಚಾಯತ್‌ರಾಜ್ ಇಲಾಖೆ ಸಂಬಂಧಪಟ್ಟ ರಸ್ತೆ ಹಾನಿಯಾಗಿ 32.31 ಕೋ.ರೂ., ಕಿರು ಸೇತುವೆ-ಕಾಲುಸಂಕ ಹಾನಿಯಾಗಿ 21.81 ಕೋ.ರೂ., ಲೋಕೋಪಯೋಗಿ ಎಂಡಿಆರ್ ರಸ್ತೆ ಹಾನಿಯಾಗಿ 41.20 ಕೋ.ರೂ., ಎಸ್‌ಎಚ್ ರಸ್ತೆ ಹಾನಿಯಾಗಿ 40.49 ಕೋ.ರೂ., ಸೇತುವೆ-ಕಾಲು ಸಂಕ ಹಾನಿಯಾಗಿ 21.78 ಕೋ.ರೂ. ಹಾಗೂ ಮೆಸ್ಕಾಂಗೆ ಸಂಬಂಧಪಟ್ಟ ಟ್ರಾನ್ಸ್‌ಫಾರ್ಮರ್, ಕಂಬ ಸಹಿತ 10.14 ಕೋ.ರೂ ಮೌಲ್ಯದ ಸೊತ್ತು ನಷ್ಟವಾಗಿದೆ ಎಂದರು.
ಮಂಗಳೂರು, ಉಳ್ಳಾಲ ಹಾಗೂ ಕಡಬ ಸಹಿತ 3 ತಾಲೂಕುಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಒಟ್ಟು 234 ಮಂದಿ ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಕಳೆದ 24 ಗಂಟೆಗಳಲ್ಲಿ ಬಂಟ್ವಾಳ ತಾಲೂಕಿನಲ್ಲಿ 0.40 ಹೆಕ್ಟೇರ್ ಪ್ರದೇಶ ಹಾನಿಗೀಡಾಗಿದೆ. ಜಿಲ್ಲೆಯಲ್ಲಿ ಒಟ್ಟು 7.190 ಹೆಕ್ಟೇರ್ ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ ಎಂದರು.