ನವದೆಹಲಿ: ಕರೊನಾ ಸಾಂಕ್ರಾಮಿಕ ಸಮಯದಲ್ಲಿ ಲಕ್ಷಾಂತರ ಜನರ ಸಾವಿಗೆ ಅಲೋಪತಿ ವೈದ್ಯರೇ ಕಾರಣ ಎಂದು ದೂಷಿಸಿರುವ ಮತ್ತು ಪತಂಜಲಿಯ ಕೊರೊನಿಲ್ ಔಷಧವನ್ನು ಚಿಕಿತ್ಸೆಯಾಗಿ ಪ್ರಚಾರ ಮಾಡುವ ಎಲ್ಲಾ ಹೇಳಿಕೆಗಳನ್ನು ಮೂರು ದಿನಗಳಲ್ಲಿ ಹಿಂಪಡೆಯುವಂತೆ ಬಾಬಾ ರಾಮ್‌ದೇವ್ ಅವರಿಗೆ ನ್ಯಾಯಾಲಯ ಸೂಚಿಸಿದೆ.
ನ್ಯಾಯಮೂರ್ತಿ ಅನುಪ್ ಜೈರಾಮ್ ಭಂಭಾನಿ ಅವರಿದ್ದ ಪೀಠವು, ಇನ್ನು ಮುಂದೆ ಇಂತಹ ಹೇಳಿಕೆಗಳನ್ನು ನೀಡದಂತೆ ರಾಮ್‌ದೇವ್ ಅವರಿಗೆ ಸೂಚಿಸಿದೆ. ಮತ್ತು ಸಾಮಾಜಿಕ ಜಾಲತಾಣದಲ್ಲಿನ ಹೇಳಿಕೆಗಳನ್ನು ಮೂರು ದಿನಗಳಲ್ಲಿ ತೆಗೆದುಹಾಕುವಂತೆ ಸೂಚಿಸಿದೆ. ಮೂರು ದಿನಗಳಲ್ಲಿ ಬಾಬಾ ರಾಮ್‌ದೇವ್ ತಮ್ಮ ಹೇಳಿಕೆಗಳನ್ನು ತೆಗೆದುಹಾಕದಿದ್ದರೆ, ಸಾಮಾಜಿಕ ಮಾಧ್ಯಮ ವೇದಿಕೆಗಳು ಆ ಹೇಳಿಕೆಗಳನ್ನು ತೆಗೆದುಹಾಕಬೇಕು ಎಂದು ನ್ಯಾಯಾಲಯ ಹೇಳಿದೆ.
ಆಯುರ್ವೇದವು ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ವೈದ್ಯಕೀಯ ವ್ಯವಸ್ಥೆಯಾಗಿದೆ. ಬಾಬಾ ರಾಮ್‌ದೇವ್ ಅವರ ಹೇಳಿಕೆಯು ಆಯುರ್ವೇದದಂತಹ ಪ್ರತಿಷ್ಠಿತ ವೈದ್ಯಕೀಯ ವ್ಯವಸ್ಥೆಗೆ ಕಳಂಕ ತರುತ್ತದೆ ಎಂದು ಈ ಪ್ರಕರಣದ ವಿಚಾರಣೆಯ ವೇಳೆ ನ್ಯಾಯಾಲಯ ತಿಳಿಸಿದೆ.
ಬಾಬಾ ರಾಮ್‌ದೇವ್ ಅವರ ಪತಂಜಲಿ ಆಯುರ್ವೇದ ಕಂಪನಿಯ ಡ್ರಗ್ ಕೊರೊನಿಲ್ ಅನ್ನು ಕರೊನಾ-19ಗೆ ಶಾಶ್ವತ ಚಿಕಿತ್ಸೆ ಎಂದು ಪ್ರತಿಪಾದಿಸಿತ್ತು. ಆ ಸಮಯದಲ್ಲಿ ಬಾಬಾ ರಾಮ್‌ದೇವ್ ಅವರು ಕೊರೊನಿಲ್ ಕೇವಲ ರೋಗನಿರೋಧಕ ಶಕ್ತಿ ಮಾತ್ರವಲ್ಲ, ಕರೊನಾ -19 ಅನ್ನು ಗುಣಪಡಿಸುವ ಔಷಧಿ ಎಂದು ಹೇಳಿದ್ದರು. ಬಾಬಾ ರಾಮ್‌ದೇವ್ ಅವರ ಹೇಳಿಕೆ ವಿರುದ್ಧ ಏಮ್ಸ್ ರಿಷಿಕೇಶದ ರೆಸಿಡೆಂಟ್ ವೈದ್ಯರ ಸಂಘ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು 2021ರಲ್ಲಿ ದೆಹಲಿ ಹೈಕೋರ್ಟ್‌ನಲ್ಲಿ ಬಾಬಾ ರಾಮ್‌ದೇವ್, ಆಚಾರ್ಯ ಬಾಲಕೃಷ್ಣ ಮತ್ತು ಪತಂಜಲಿ ಆಯುರ್ವೇದ ವಿರುದ್ಧ ಸಲ್ಲಿಸಲಾಯಿತು