ಸವದತ್ತಿ: ಮಹಾದಾಯಿ, ಕಳಸಾ-ಬಂಡೂರಿ ಸೇರಿ 13 ಟಿಎಂಸಿ ಅಡಿ ನೀರು ಮಲಪ್ರಭೆಗೆ ಹರಿಸಬೇಕಿದೆ. ಗೋವಾ ಸರ್ಕಾರದ ಉದ್ಧಟತನದಿಂದ ವಿಳಂಬವಾಗುತ್ತಿದೆ. ಅರಣ್ಯ, ನೀರಾವರಿ ಇಲಾಖೆಗಳಿಂದ ಕ್ಲಿಯರನ್ಸ್ ಬಂದಿದ್ದು, ಕೆಲ ದಿನಗಳಲ್ಲಿ ಇದಕ್ಕೊಂದು ತಾರ್ಕಿಕ ಅಂತ್ಯ ನೀಡಲಾಗುವುದು ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.
ಇಲ್ಲಿನ ಕಲ್ಮಠದ ಆರವಣದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ತಾಲ್ಲೂಕು ಘಟಕದಿಂದ ಭಾನುವಾರ ಜರುಗಿದ ಪ್ರತಿಭಾ ಪುರಸ್ಕಾರ ಮತ್ತು ಗೌರವ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೆಲವರ ಹಿತಾಸಕ್ತಿ ಕಾರಣ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕ ದುರ್ಬಲವಾಗಿದ್ದರೂ, ತಾಲ್ಲೂಕು ಘಟಕಗಳ ಸಂಘಟನೆ ಪ್ರಬಲವಾಗಿವೆ. ಸಮಾಜ ಬಲಗೊಳ್ಳಲು ಎಲ್ಲರ ಸಹಕಾರ ಅಗತ್ಯ. ಕುಲಕಸಬು ವ್ಯಾಪಾರವಾದರೂ ಇಂದಿನ ಯುವಕರು ಬೇರೆ ಬೇರೆ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವುದು ಸಂತಸ ತಂದಿದೆ ಎಂದರು.
ಈ ಭಾಗದಲ್ಲಿ ರೈಲ್ವೆ ಸಂಪರ್ಕದ ಕುರಿತು ಯೋಜನೆ ಸಿದ್ಧಪಡಿಸಲಾಗಿದೆ. ಉನ್ನತಮಟ್ಟದ ಅಧಿಕಾರಿಗಳು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ರೈಲು ಮಾರ್ಗ ತರಲು ಶ್ರಮಿಸುತ್ತೇನೆ. ಮೂಲ ಸೌಕರ್ಯ ಸೇರಿ ಉದ್ಯಮ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು ಎಂದರು.