ಖಾನಾಪುರ: 93 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶದಿಂದ ಸುತ್ತುವರಿದ ಖಾನಾಪುರ ತಾಲ್ಲೂಕಿನ 100ಕ್ಕೂ ಹೆಚ್ಚು ಗ್ರಾಮಗಳು ದಟ್ಟ ಅರಣ್ಯ ಪ್ರದೇಶದಲ್ಲಿವೆ. ಪ್ರತಿ ಬಾರಿ ಮಳೆಗಾಲದಲ್ಲಿ ಈ ಗ್ರಾಮಗಳು ಮುಖ್ಯ ವಾಹಿನಿಯಿಂದ ಸಂಪರ್ಕ ಕಡಿತಗೊಳ್ಳುತ್ತವೆ. ಮಳೆಗಾಲ ಮುಗಿಯುವವರೆಗೂ ಭಯದಲ್ಲೇ ಬದುಕಬೇಕಾದ ಅನಿವಾರ್ಯವಿದೆ.
ಲೋಂಡಾ, ನಾಗರಗಾಳಿ, ಕಣಕುಂಬಿ ಮತ್ತು ಭೀಮಗಡ ವನ್ಯಧಾಮ ವ್ಯಾಪ್ತಿಯಲ್ಲಿರುವ ಈ ಗ್ರಾಮಗಳ ವ್ಯಾಪ್ತಿಯಲ್ಲಿ ಹೊಲ- ಗದ್ದೆಗಳು ಮತ್ತು ಜನವಸತಿಗಿಂತ ಅರಣ್ಯ ಪ್ರದೇಶವೇ ಅಧಿಕ ಪ್ರಮಾಣದಲ್ಲಿದೆ. ವನ್ಯಜೀವಿಗಳ ಮೇಲೆ ಮನುಷ್ಯರ ದಾಳಿ ಹಾಗೂ ಮನುಷ್ಯರ ಮೇಲೆ ಮೃಗಗಳ ದಾಳಿ ನಿರಂತರವಾಗಿ ನಡೆಯುತ್ತಲೇ ಇದೆ. ಪೂರ್ವಜರ ಕಾಲದಿಂದಲೂ ಇಂತಹ ಗ್ರಾಮಗಳಲ್ಲಿ ವಾಸಿಸುತ್ತಿರುವ ಕಾನನವಾಸಿಗಳು ಇಂದಿಗೂ ರಸ್ತೆ, ಸೇತುವೆ, ಸಾರಿಗೆ ವ್ಯವಸ್ಥೆ, ಶಿಕ್ಷಣ, ವಿದ್ಯುತ್ ಆರೋಗ್ಯ ಮತ್ತಿತರ ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
ಸ್ಥಳಾಂತರ ಯತ್ನ: ಕಾಡು ಜನರ ಮನವೊಲಿಸಿ ಸ್ಥಳಾಂತರಗೊಳಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಇತ್ತೀಚಿನ ದಿನಗಳಲ್ಲಿ ಕಾರ್ಯಪ್ರವೃತ್ತವಾಗಿದೆ. ಈಗಾಗಲೇ ಭೀಮಗಡ ವನ್ಯಧಾಮ ವ್ಯಾಪ್ತಿಯ ತಳೇವಾಡಿ ಗ್ರಾಮದ ಜನರ ಮನವೊಲಿಸಿ ಅವರು ವಾಸಿಸುವ ಊರಿನ ಸುತ್ತಮುತ್ತಲಿನ ಅರಣ್ಯಪ್ರದೇಶವನ್ನು ಸಂಪೂರ್ಣವಾಗಿ ವನ್ಯಜೀವಿಗಳಿಗೆ ಬಿಟ್ಟುಕೊಡುವ ಕೆಲಸ ಬಹುತೇಕ ಮುಗಿತ್ತ ಬಂದಿದೆ.
ಇದೇ ಮಾದರಿಯಲ್ಲಿ ಇನ್ನುಳಿದ ಕಾನನದಂಚಿನ ಗ್ರಾಮಗಳಲ್ಲೂ ಈ ಕಾರ್ಯವನ್ನು ಕಾರ್ಯಗತಗೊಳಿಸುವುದು ಅಗತ್ಯ ಎಂಬುದು ಜನರ ಬೇಡಿಕೆ.
ಮೂರು ಕಾಲುಸಂಕ: ನೇರಸಾ ಗ್ರಾಮದಿಂದ ಕೊಂಗಳಾ, ಗವ್ವಾಳಿ ಮತ್ತು ಪಾಸ್ತೋಳಿ ಗ್ರಾಮಗಳಿಗೆ ತೆರಳಲು ಮಧ್ಯೆ ಹರಿಯುವ ಭಂಡೂರಿ ಹಳ್ಳ ಮತ್ತು ಮಹದಾಯಿ ನದಿಗಳಿಗೆ ತಲಾ ಒಂದು ಹಾಗೂ ಕೃಷ್ಣಾಪುರ ಗ್ರಾಮದಿಂದ ಗೋವಾಗೆ ತೆರಳುವ ಮಾರ್ಗದ ಮಾಂಡವಿ ನದಿಗೆ ಒಂದು ಸೇರಿದಂತೆ ಮೂರು ಕಾಲುಸಂಕಗಳನ್ನು ಸ್ಥಳೀಯ ಜನರು ನಿರ್ಮಿಸಿಕೊಳ್ಳುತ್ತಾರೆ.