ಚಿಕ್ಕೋಡಿ: ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಕಳೆದ 15 ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆ ಬೀಳುತ್ತಿರುವ ಪರಿಣಾಮವಾಗಿ ಕೃಷ್ಣಾ ನದಿಗೆ 2 ಲಕ್ಷ 75 ಸಾವಿರ ಕ್ಯುಸೆಕ್‌ಗೂ ಹೆಚ್ಚು ನೀರು ಹರಿದು ಬರುತ್ತಿದೆ. ಹೀಗಾಗಿ ಕೃಷ್ಣಾ ನದಿ ತೀರದಲ್ಲಿರುವ ಚಿಕ್ಕೋಡಿ ತಾಲ್ಲೂಕಿನ ಯಡೂರು ಗ್ರಾಮದ ಪೌರಾಣಿಕ ಹಿನ್ನೆಲೆಯ ವೀರಭದ್ರೇಶ್ವರ ದೇವಸ್ಥಾನದ ಗರ್ಭಗುಡಿ ಸಂಪೂರ್ಣ ಜಲಾವೃತಗೊಂಡಿದೆ.

ಶನಿವಾರ ತಡರಾತ್ರಿ ದೇವಸ್ಥಾನದ ದಕ್ಷಿಣ ದ್ವಾರದಿಂದ ಕೃಷ್ಣಾ ನದಿ ನೀರು ಗರ್ಭಗುಡಿಯೊಳಗೆ ಪ್ರವೇಶಿಸಿತು. ನದಿ ನೀರು ಗರ್ಭಗುಡಿಯೊಳಗೆ ಪ್ರವೇಶಸುತ್ತಿದ್ದಂತೆಯೇ ವೀರಭದ್ರದೇವರಿಗೆ ಕೃಷ್ಣೆಯ ಜಲಾಭಿಷೇಕವಾಯಿತೆಂದು ಅರ್ಚಕರು ಪೂಜೆ, ಆರತಿ ನೆರವೇರಿಸಿದರು. ಸಕಲ ವಾದ್ಯ ವೈಭವಗಳೊಂದಿಗೆ ಭಕ್ತಿ ಭಾವದಿಂದ ವೀರಭದ್ರೇಶ್ವರ ಹಾಗೂ ಭದ್ರಕಾಳೇಶ್ವರಿ ದೇವರ ಮೂರ್ತಿಗಳನ್ನು ಕಾಡಸಿದ್ದೇಶ್ವರ ಮಠಕ್ಕೆ ತಂದು ಪ್ರತಿಷ್ಠಾಪಿಸಲಾಯಿತು
Laxmi News 24×7