ಸವದತ್ತಿ: ಸರ್ಕಾರಕ್ಕೆ ಹೊರೆಯಾದರೂ ಜನೋಪಯೋಗಿ ಗ್ಯಾರಂಟಿಗಳು ನಿಲ್ಲುವುದಿಲ್ಲ ಎಂದು ಶಾಸಕ ವಿಶ್ವಾಸ್ ವೈದ್ಯ ಹೇಳಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ತಾಲ್ಲೂಕು ಮಟ್ಟದ ಅನುಷ್ಟಾನ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನ 89 ಸಾವಿರ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪೈಕಿ ಈಗಾಗಲೇ 84,174 ಅರ್ಜಿ ಸಲ್ಲಿಕೆಯಾಗಿವೆ. ಅದರಲ್ಲಿ ಶೇ 90 ಕುಟುಂಬದ ಯಜಮಾನಿ ಖಾತೆಗೆ ಹಣ ಜಮೆಯಾಗುತ್ತಿದೆ. ಕೆಲ ತಾಂತ್ರಿಕ ಸಮಸ್ಯೆಗಳಿಂದ ಇನ್ನು ಕೆಲವಷ್ಟು ಜನರಿಗೆ ಹಣ ಜಮೆಯಾಗಿಲ್ಲ. ಶೀಘ್ರವೇ ಸಮಸ್ಯೆ ಪರಿಹರಿಸಬೇಕು ಎಂದು ಸೂಚಿಸಿದರು.
ಗೃಹಜ್ಯೋತಿ ಯೋಜನೆಯಡಿ 60,454ರ ಪೈಕಿ 58,164 ಕುಟುಂಬಗಳು ಯೋಜನೆಯ ಲಾಭ ಪಡೆದಿವೆ. ಇಲ್ಲಿಯವರೆಗೆ ಶೇ 97ರಷ್ಟು ಪ್ರಗತಿ ಸಾಧಿಸಲಾಗಿದೆ. ಯುವ ನಿಧಿ ಕುರಿತು ಪಂಚಾಯಿತಿ ಮಟ್ಟದಲ್ಲಿ ಅರ್ಜಿ ಸ್ವೀಕರಿಸಲು ಕ್ರಮ ವಹಿಸಲಾಗಿದೆ ಎಂದರು.
ಸಮಿತಿ ಅಧ್ಯಕ್ಷ ಶಿವಕುಮಾರ ರಾಥೋಡ ಮಾತನಾಡಿದರು. ನೂತನ ಸಮಿತಿ ಸದಸ್ಯರನ್ನು ಶಾಸಕ ವಿಶ್ವಾಸ್ ವೈದ್ಯ ಅವರು ಸನ್ಮಾನಿಸಿದರು. ತಾಪಂ ಇಒ ಯಶವಂತಕುಮಾರ, ಸಿಡಿಪಿಒ ಸುನೀತಾ ಪಾಟೀಲ, ಎಡಿ ಆರ್.ಎ. ಪಾಟೀಲ, ಮಾರುತಿ ಚೌಡಕ್ಕನವರ ಇದ್ದರು.