ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸದನದಲ್ಲಿ ಭಾರೀ ಸದ್ದು ಮಾಡಿದ್ದು, ಗುರುವಾರ ಚರ್ಚೆ ವೇಳೆ, ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಡಿಸಿಎಂ ಡಾ| ಸಿ.ಎನ್. ಅಶ್ವತ್ಥನಾರಾಯಣ ಮಧ್ಯೆ ಜಟಾಪಟಿಗೆ ಕಾರಣವಾಗಿದೆ.
“ನಿಮ್ಮಲ್ಲಿ ಕೆಲವರದ್ದು ತೆಗೆಯುತ್ತೇನೆ ಈಗ, ಯಾರ ಯಾರ ಕಾಲದಲ್ಲಿ ಏನೇನು ಆಯ್ತು ಎಂಬುದನ್ನು ಬಿಚ್ಚಿಡುತ್ತೇನೆ’ ಎಂದು ಸಿಎಂ ಸಿದ್ದರಾಮಯ್ಯ ನೀಡಿದ ಹೇಳಿಕೆ ವಿಧಾನಸಭೆಯಲ್ಲಿ ತೀವ್ರ ವಾಗ್ವಾದಕ್ಕೆ ಕಾರಣವಾಗಿದ್ದು, ಸಿಎಂ ಸಿದ್ದರಾಮಯ್ಯ-ಮಾಜಿ ಡಿಸಿಎಂ ಡಾ.
ಸಿ.ಎನ್. ಅಶ್ವತ್ಥನಾರಾಯಣ ಮಧ್ಯೆ ಏಕವಚನ ಪ್ರಯೋಗದೊಂದಿಗೆ ಅಂತ್ಯಕಂಡಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಸಚಿವರ ದಂಡಿನೊಂದಿಗೆ ಸದನಕ್ಕೆ ಬಂದ ಸಿದ್ದರಾಮಯ್ಯ, ಹಿಂದಿನ ಸರಕಾರದ ಅವಧಿಯಲ್ಲಿ ನಡೆದ ಹಗರಣಗಳನ್ನು ಬಿಚ್ಚಿಡುವ ಅಸ್ತ್ರ ಪ್ರಯೋಗಿಸಿದರು. ಆದರೆ, ಇದಕ್ಕೆ ಸೊಪ್ಪು ಹಾಕದ ಅಶ್ವತ್ಥನಾರಾಯಣ, ಸಿದ್ದರಾಮಯ್ಯ ವಿರುದ್ಧ ಏರಿ ಹೋದರು. ಏನು ಬಿಚ್ಚಿಡುತ್ತೀರಿ? ನಿಮ್ಮದು 100 ಪರ್ಸೆಂಟ್ ಸರಕಾರ ಎಂಬುದು ಗೊತ್ತು ಎಂದು ತಿರುಗೇಟು ಕೊಟ್ಟರು.