ಮುಂಡಗೋಡ: ತಾಲ್ಲೂಕಿನ ಇಂದೂರ, ಅಜ್ಜಳ್ಳಿ, ಬಸವನಕೊಪ್ಪ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬುಧವಾರ ಮೊಹರಂ ಆಚರಿಸಲಾಯಿತು.
ಮುಸ್ಲಿಮ ಜನಸಂಖ್ಯೆ ಇಲ್ಲದ ಕೆಲವು ಊರುಗಳಲ್ಲಿಯೂ ಹಿಂದೂಗಳು ಮುಂಚೂಣಿಯಲ್ಲಿದ್ದು ಮೊಹರಂ ಆಚರಿಸಿರುವುದು ವಿಶೇಷವಾಗಿತ್ತು. ಸುರಿಯುವ ಮಳೆಯ ನಡುವೆಯೂ, ದೇವರು ಹೊಳೆಗೆ ಹೋಗುವ ಕಾರ್ಯಕ್ರಮ ನೂರಾರು ಜನರ ಸಮ್ಮುಖದಲ್ಲಿ ನಡೆಯಿತು.
ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯದ ಸಂಕೇತದಂತೆ ಮೊಹರಂ ಆಚರಣೆ ಮಾಡಿದರು. ಕಳೆದ ಐದು ದಿನಗಳ ಹಿಂದೆ ತಾಲ್ಲೂಕಿನ ಬಹುತೇಕ ಕಡೆ ಪಂಜಾಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಹೆಜ್ಜೆ ಮಜಲು, ಶೋಕಗೀತೆ ರಚಿಸುತ್ತ, ಅದರ ಹಾಡಿಗೆ ತಕ್ಕಂತೆ ಕುಣಿತವು ಕೊನೆಯ ದಿನದ ಮೊಹರಂ ವಿಶೇಷವಾಗಿತ್ತು.
ಹಿಂದಿನಿಂದ ಆಚರಣೆಯನ್ನು ನಡೆಸಿಕೊಂಡು ಬಂದ ಕುಟುಂಬ ಸದಸ್ಯರು, ಹರಕೆ ಹೊತ್ತಿದ್ದ ಜನರು ಮೈಗೆ ಹುಲಿ ಬಣ್ಣ ಬಳಿದುಕೊಂಡು, ಬಿಡುವು ನೀಡುತ್ತಿದ್ದ ಮಳೆಯ ನಡುವೆ ಹೆಜ್ಜೆ ಹಾಕುತ್ತ ಸಾಗಿದರು. ಇದರ ಜೊತೆಗೆ ಪಂಜಾ ಗಳ ಸವಾರಿ ಸಾಗಿತು.
‘ಅನಾರೋಗ್ಯದ ಸಮಸ್ಯೆ ಸೇರಿದಂತೆ ಕಷ್ಟಗಳು ಎದುರಾದಾಗ ಅವುಗಳ ನಿವಾರಣೆಗೆ ಅಲ್ಲಬ್ಬ ದಲ್ಲಿ ಹರಕೆ ಹೊರುತ್ತಾರೆ. ಬೇಡಿಕೆಗಳು ಈಡೇರಿದಾಗ ಹುಲಿವೇಷ ಹಾಕಿ ದೇವರಿಗೆ ಅರ್ಪಿಸುತ್ತಾರೆ’ ಎಂದು ಗ್ರಾಮಸ್ಥ ಫಕ್ಕೀರಪ್ಪ ಹೇಳಿದರು.