ಬೈಲಹೊಂಗಲ: ಸಮೀಪದ ಹೊಸೂರ ಗ್ರಾಮದ ಗುರು ಮಡಿವಾಳೇಶ್ವರ ಮಠದ ಕಲ್ಯಾಣ ಮಂಟಪ ಆವರಣದಲ್ಲಿ ಶುಕ್ರವಾರ ಸಂಭ್ರಮ ಮನೆ ಮಾಡಿತ್ತು. ಬಂಧು-ಬಳಗದವರೆಲ್ಲ ಸೇರಿ ಕುಪ್ಪಸ ಕಾರ್ಯಕ್ರಮ (ಸೀಮಂತ) ನಡೆಸಿಕೊಟ್ಟರು. ತುಂಬು ಗರ್ಭಿಣಿಯ ಕಣ್ಣಲ್ಲಿ ಕರುಳ ಕುಡಿಯ ಕನಸು ಚಿಮ್ಮಿತು…
ಅಂದಹಾಗೆ ಇದು ಯಾವುದೋ ಹೆಣ್ಣುಮಗಳಿಗೆ ಮಾಡಿದ ಸೀಮಂತವಲ್ಲ. ಗರ್ಭ ಧರಿಸಿದ ಹಸುವನ್ನು ತಮ್ಮ ತವರ ಮಗಳು ಎಂಬಂತೆ ಗ್ರಾಮಸ್ಥರೇ ಮಾಡಿದ ಕುಪ್ಪಸ ಕಾರ್ಯಕ್ರಮ.
ಮಡಿವಾಳೇಶ್ವರ ಮಠದ ಗರ್ಭಿಣಿ ಆಕಳಿಗೆ ಮಂಟಪ ಹಾಕಿ, ಸೀರೆ ಉಡಿಸಿ, ಸುಂದರವಾಗಿ ಸಿಂಗರಿಸಿ ಮುತ್ತೈದೆಯರು ಆರತಿ ಬೆಳಗಿದರು. ಅಜ್ಜಿಯಂದಿರು, ಗೃಹಿಣಿಯರು ಸೊಗಸಾಗಿ ಸೋಭಾನೆ ಪದ ಹಾಡಿದರು. ಗೋವಿಗೆ ದೃಷ್ಟಿ ತೆಗೆದರು. ಮನೆ ಮಗಳಿಗೆ ತೋರುವ ಪ್ರೀತಿ, ಕಾಳಜಿ, ಮಮತೆ ತೋರಿ ಊಡಿ ತುಂಬಿ ಶುಭ ಹಾರೈಸಿದರು.
ಬಗೆ, ಬಗೆಯ ಭಕ್ಷ್ಯಗಳನ್ನು ಮಾಡಿ ಗ್ರಾಮಸ್ಥರಿಗೆಲ್ಲ ಉಣಬಡಿಸಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮ ಗ್ರಾಮಸ್ಥರಿಗೆ ಸಂತಸ ತರುವುದರೊಂದಿಗೆ ಗೋವನ್ನು ಮನೆ ಮಕ್ಕಳಂತೆ ಪ್ರೀತಿಸಬೇಕೆನ್ನುವ ಸಂದೇಶ ಸಾರಿದರು. ಗ್ರಾಮದ ಎಲ್ಲ ಭಜನಾ ತಂಡಗಳಿಂದ ನಿರಂತರ ಭಜನೆ, ಜಾಗರಣೆ ನಡೆಯಿತು.