ಮೈಸೂರು: ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 50:50 ಅನುಪಾತದಡಿ ನಿವೇಶನ ಹಂಚಿಕೆಯು ಕಾನೂನುಬದ್ಧವಾಗಿದೆ’ ಎಂದು ಕಾಂಗ್ರೆಸ್ ಮುಖಂಡ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಪ್ರತಿಪಾದಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಮುಡಾಗೆ ಆಗುತ್ತಿದ್ದ ನಷ್ಟವನ್ನು ತಪ್ಪಿಸಲು, ಭೂ ಮಾಲೀಕರಿಗೆ ಕಚೇರಿ ಅಲೆದಾಟ ತಪ್ಪಿಸಲು ಪ್ರಾಧಿಕಾರದ ಸಭೆಯಲ್ಲಿ ಸದಸ್ಯರು ಚರ್ಚಿಸಿ ಸರ್ವಾನುಮತದಿಂದ 50:50 ಅನುಪಾತದಲ್ಲಿ ನಿವೇಶನ ಹಂಚುವ ನಿರ್ಣಯ ಕೈಗೊಳ್ಳಲಾಯಿತು’ ಎಂದರು.
‘2013ರ ಭೂಸ್ವಾಧೀನ ತಿದ್ದುಪಡಿ ಕಾಯ್ದೆ, ಶ್ರೀರಾಂಪುರದ ಸುಂದರಮ್ಮ ಹಾಗೂ ಮುಡಾ ವಿರುದ್ಧದ ಪ್ರಕರಣ, ಬೆಳ್ಳಿಯಪ್ಪ ಮತ್ತು ಬಿಡಿಎ ವಿರುದ್ಧದ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ ತೀರ್ಪು ಹಾಗೂ ಇಂದೋರ್ ಅಭಿವೃದ್ಧಿ ಪ್ರಾಧಿಕಾರ – ಮನೋಹರಲಾಲ್ ಮತ್ತು ಇತರರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಆಧರಿಸಿ ನಿವೇಶನ ಹಂಚುವ ತೀರ್ಮಾನ ಮಾಡಲಾಗಿದೆ’ ಎಂದು ವಿವರಿಸಿದರು.
‘ರೈತರಿಂದ ಭೂಸ್ವಾಧೀನ ಪಡಿಸಿಕೊಳ್ಳದೇ ಅವರ ಜಮೀನನ್ನು ಬಡಾವಣೆಯಾಗಿ ಅಭಿವೃದ್ಧಿ ಪಡಿಸಿ, ಪರಿಹಾರವನ್ನೂ ಹಂಚಿಕೆ ಮಾಡದ ಹಲವು ಪ್ರಕರಣಗಳು ಮುಡಾದಲ್ಲಿದ್ದವು. ಪರಿಹಾರಕ್ಕಾಗಿ ಭೂ ಮಾಲೀಕರು ಕಚೇರಿಗೆ ಅಲೆಯುವಂತಾಗಿತ್ತು. ಶೇ 100ರಷ್ಟು ಜಮೀನನ್ನು ಮೂಲ ಮಾಲೀಕರಿಗೆ ವಾಪಸು ಮಾಡುವ ತೀರ್ಪನ್ನು ಹೈಕೋರ್ಟ್ ನೀಡಿದ್ದರಿಂದ ಮುಡಾಗೆ ಆಗುವ ಭಾರಿ ನಷ್ಟ ತಪ್ಪಿಸಲು ಸಭೆಯು ಈ ನಿರ್ಧಾರ ಮಾಡಿತ್ತು’ ಎಂದು ಹೇಳಿದರು.
Laxmi News 24×7