ಬೆಳಗಾವಿ: ‘ತಮ್ಮ ಕೆಲಸಗಳಿಗೆ ಉತ್ತಮ ಮೊಬೈಲ್ ಅಗತ್ಯ ಎಂದು ಅಂಗನವಾಡಿ ಕಾರ್ಯಕರ್ತೆಯರು ಕಳೆದ ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಿದ್ದರು. ಇದಕ್ಕೆ ಹಿಂದಿನ ಬಿಜೆಪಿ ಸರ್ಕಾರ ಸ್ಪಂದಿಸಿರಲಿಲ್ಲ. ನಾನು ಮುಖ್ಯಮಂತ್ರಿಗೆ, ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿದ್ದರಿಂದ ಮೊಬೈಲ್ ಮಂಜೂರಾಗಿವೆ’ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದ್ದಾರೆ.
‘ಮೊಬೈಲ್ ಮಂಜೂರು ಮಾಡಿದ್ದು ಕೇಂದ್ರ ಸರ್ಕಾರ’ ಎಂಬ ಶಾಸಕ ಅಭಯ ಪಾಟೀಲ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಕೇಂದ್ರ ಸರ್ಕಾರ ಪೋಷಣ್ ಅಭಿಯಾನದ ಅಡಿಯಲ್ಲಿ ಅನುದಾನ ನೀಡಿದೆಯೇ ವಿನಃ ಇದೇನೂ ವಿಶೇಷ ಅನುದಾನವಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ 60:40ರ ಅನುಪಾತದಲ್ಲಿ ಇದು ಮಂಜೂರಾಗಿದೆ. ಕೇಂದ್ರದ ಅನೇಕ ಯೋಜನೆಗಳಿಗೂ ರಾಜ್ಯ ಸರ್ಕಾರ ಪಾಲು ನೀಡುತ್ತದೆ. ಆದರೆ, ಯೋಜನೆ ಯಾವ ಸರ್ಕಾರದ ಮೂಲಕ ಜಾರಿಗೊಳ್ಳುತ್ತದೆ ಎನ್ನುವುದರ ಮೇಲೆ ಆ ಯೋಜನೆ ಯಾರದ್ದು ಎಂದು ಗುರುತಿಸಲ್ಪಡುತ್ತದೆ. ಹಾಗಾಗಿ, ಇದು ರಾಜ್ಯ ಸರ್ಕಾರದ ಯೋಜನೆಯಾಗಿದೆ’ ಎಂದಿದ್ದಾರೆ.