ಬಳ್ಳಾರಿ: ತಮ್ಮ ಉತ್ಪನ್ನಗಳನ್ನು ಖರೀದಿಸಿದ ಖಾಸಗಿ ಕಂಪನಿಯು ಕಳೆದ ಒಂದೂವರೆ ವರ್ಷಗಳಿಂದ ಹಣವನ್ನು ಪಾವತಿಸದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದ ನಾಲ್ವರು ಮೆಣಸಿನಕಾಯಿ ರೈತರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ರುದ್ರೇಶ್ (55), ಹನುಮಂತ್ (40), ಶೇಖರ್ (45) ಮತ್ತು ಕುನೇಶ್ (50) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಹಣ ಪಾವತಿ ಮಾಡಲು ವಿಳಂಬ ಮಾಡಿದ್ದನ್ನು ವಿರೋಧಿಸಿ ಇತರ ರೈತರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ವಿಷ ಸೇವಿಸಿದ್ದಾರೆ. ಅವರನ್ನು ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ.
ಬೆಂಗಳೂರು ಮೂಲದ ಅಗ್ರಿಗ್ರೀಡ್ ಪ್ರೈವೇಟ್ ಲಿಮಿಟೆಡ್ 100 ರೈತರಿಂದ 1.9 ಕೋಟಿ ರೂಪಾಯಿ ಮೌಲ್ಯದ ಮೆಣಸಿನಕಾಯಿ ಖರೀದಿಸಿದೆ ಎಂದು ರೈತರು ತಿಳಿಸಿದ್ದಾರೆ.
54 ರೈತರ ಬಿಲ್ ಕ್ಲಿಯರ್ ಆಗಿದ್ದು, ಉಳಿದ 46 ರೈತರಿಗೆ ಇನ್ನೂ ಹಣ ಬಂದಿಲ್ಲ. ಬಿಲ್ ಬಾಕಿ ಉಳಿದಿರುವ ರೈತರಲ್ಲಿ ಒಬ್ಬರಾದ ಹನುಮಂತಪ್ಪ ವಡ್ಡರ ಮಾತನಾಡಿ, ‘ಕಂಪೆನಿಯಲ್ಲಿ ಜಿಲ್ಲೆಯ ಹೆಸರಾಂತ ವ್ಯಕ್ತಿಗಳು ಷೇರುದಾರರಾಗಿದ್ದಾರೆ. ಅವರನ್ನು ನಂಬಿ 220 ಟನ್ ಮೆಣಸಿನಕಾಯಿಯನ್ನು ಕಂಪನಿಗೆ ಮಾರಾಟ ಮಾಡಿದೆವು. ಸಾಮಾನ್ಯವಾಗಿ ಬ್ಯಾಡಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದು, ಖಾಸಗಿ ಕಂಪನಿಗೆ ನೀಡಿದ್ದು ಇದೇ ಮೊದಲು. ಎಂದು ಹೇಳಿದ್ದಾರೆ.