ಡಿಸಿಎಂ ಹುದ್ದೆ ರದ್ದುಪಡಿಸಿ, ಇಲ್ಲವೇ ಸುವರ್ಣ ವಿಧಾನಸೌಧಕ್ಕೆ CM ನೇಮಿಸಿ: ಭೀಮಪ್ಪ
ಬೆಳಗಾವಿ: ‘ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆ ಮಾನ್ಯತೆ ಬಗ್ಗೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಹಾಕಲು ಯೋಜಿಸಿದ್ದೇನೆ. ಇದಕ್ಕಾಗಿ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಪತ್ರ ಬರೆದಿದ್ದೇನೆ. ಅವರ ಅಭಿಪ್ರಾಯ ಆಧರಿಸಿ ಮುಂದುವರಿಯುತ್ತೇನೆ’ ಎಂದು ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಹೇಳಿದರು.
ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂವಿಧಾನದಲ್ಲಿ ಡಿಸಿಎಂ ಹುದ್ದೆ ಬಗ್ಗೆ ಉಲ್ಲೇಖವೇ ಇಲ್ಲ. ಆದರೂ, ರಾಜ್ಯ ಸರ್ಕಾರ ಒಬ್ಬರನ್ನು ಡಿಸಿಎಂ ಮಾಡಿದೆ. ಅಲ್ಲದೆ, ಈಗ ಹಲವು ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಮಾತನಾಡುತ್ತಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಜಿ.ಪರಮೇಶ್ವರ, ಎಚ್.ಕೆ.ಪಾಟೀಲ, ಸತೀಶ ಜಾರಕಿಹೊಳಿ, ಕೆ.ರಾಜಣ್ಣ ಅವರಿಗೆ ಪತ್ರ ಬರೆದಿದ್ದೇನೆ.
ಸರ್ಕಾರ ಸಂವಿಧಾನಬದ್ಧವಾಗಿ ಆಡಳಿತ ನಡೆಸುತ್ತಿದೆಯೋ ಅಥವಾ ಸಾಂಪ್ರದಾಯಿಕವಾಗಿ ನಡೆದುಕೊಳ್ಳುತ್ತಿದೆಯೋ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.