ದೇವರಹಿಪ್ಪರಗಿ: ಪಟ್ಟಣ, ದೇವೂರ ಗ್ರಾಮ ಸೇರಿದಂತೆ ತಾಲ್ಲೂಕಿನಾದ್ಯಂತ ಅವ್ಯಾಹತವಾಗಿ ನಡೆಯುತ್ತಿರುವ ಮದ್ಯ ಅಕ್ರಮ ಮಾರಾಟ ಹಾಗೂ ಪಾನ್ ಶಾಪ್‌ಗಳಲ್ಲಿ ಗಾಂಜಾ ಮಿಶ್ರಿತ ಮಾವಾ ಎಂಬ ಮಾದಕ ಪದಾರ್ಥ ಮಾರಾಟ ತಡೆಯಬೇಕೆಂದು ಮಹಿಳೆಯರು ಆಗ್ರಹಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಗೆ ಸೋಮವಾರ ದೇವೂರ ಹಾಗೂ ವಿವಿಧ ಗ್ರಾಮಗಳ ಮಹಿಳೆಯರು ಆಗಮಿಸಿ, ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.
ರೇಣುಕಾ ಪಾಟೀಲ ಮಾತನಾಡಿ, ಪಟ್ಟಣದ ಹಲವು ಅಂಗಡಿ ಹಾಗೂ ದೇವೂರ ಗ್ರಾಮದ ವಿವಿಧೆಡೆ ಮದ್ಯ ಅಕ್ರಮ ಮಾರಾಟ ಹಾಗೂ ಪಾನ್ ಶಾಪ್‌ಗಳಲ್ಲಿ ಗಾಂಜಾ ಮಿಶ್ರಿತ ಮಾವಾ ಮಾರಾಟ ಮಾಡುತ್ತಿದ್ದು, ಸ್ಥಳೀಯ ಯುವಕರು ಹಾಗೂ ಗಂಡಸರು ದುಶ್ಚಟಕ್ಕೆ ದಾಸರಾಗಿದ್ದಾರೆ. ಇದರಿಂದ ಮಹಿಳೆಯರು ವಿಚಲಿತರಾಗಿದ್ದಾರೆ. ಕೂಡಲೇ ತಾಲ್ಲೂಕು ಆಡಳಿತ ಕ್ರಮ ವಹಿಸಬೇಕು. ಇಲ್ಲವಾದರೆ ನಾವೆಲ್ಲ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.