ಬೆಂಗಳೂರು, ಜೂನ್.24: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಡಿಕೆ ಸುರೇಶ್ ಅವರು ತಮ್ಮ ಸೋಲಿನಿಂದ ಬೇಸರದಲ್ಲಿದ್ದಾರೆ ಎಂಬುದು ಎಲ್ಲರಿಗೂ ತಿಳಿಯುತ್ತಿದೆ. ತಮ್ಮನನ್ನು ಮತ್ತೆ ರಾಜಕೀಯಕ್ಕೆ ಕರೆತರಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಾಕಷ್ಟು ಶ್ರಮ ಹಾಕುತ್ತಿದ್ದಾರೆ.
ಹೀಗಾಗಿಯೇ ಚನ್ನಪಟ್ಟಣ ಉಪಚುನಾವಣೆಯಲ್ಲಿ ತಾವೇ ಕಣಕ್ಕಿಳಿಯುವ ಬಗ್ಗೆ ಮಾತನಾಡಿದ್ದಾರೆ.
ಆದರೆ, ಲೋಕಸಭಾ ಚುನಾವಣಾ ಸೋಲಿನಿಂದ ಒತ್ತಡದಲ್ಲಿದ್ದ ಮಾಜಿ ಸಂಸದ ಡಿಕೆ ಸುರೇಶ್ ರಾಜಕೀಯದಿಂದ ದೂರ ಸರಿಯುವ ಬಗ್ಗೆ ಮಾತನಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಮಂಡ್ಯ ಸಂಸದ, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ಉಪಚುನಾವಣೆಯಲ್ಲಿ ತಾವು ನಿಲ್ಲುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ!
ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಮಾಜಿ ಸಂಸದ ಡಿಕೆ ಸುರೇಶ್, ನಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಜನ ನನಗೆ ರೆಸ್ಟ್ ಕೊಟ್ಟಿದ್ದಾರೆ, ರೆಸ್ಟ್ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ನಾನು ಚುನಾವಣೆಗೆ ನಿಲ್ಲುವುದು ಇದೆಲ್ಲವೂ ಮಾಧ್ಯಮಗಳ ಊಹಾಪೋಹವಷ್ಟೇ. ಚುನಾವಣೆ ಸೋಲಿನಿಂದ ನಾನು ಒತ್ತಡದಲ್ಲಿದ್ದೆ, ಸದ್ಯ ಅದರಿಂದ ಹೊರಗಡೆ ಬಂದಿದ್ದೇನೆ ಎಂದಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಆಘಾತ ನೀಡಿದೆ.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಡಿಕೆ ಸುರೇಶ್ ಸ್ಪರ್ಧೆ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, “ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವ ವಿಚಾರ ನನ್ನ ಮುಂದೆ ಇಲ್ಲ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್, ಮುಖ್ಯಮಂತ್ರಿ ಹಾಗೂ ಡಿಸಿಎಂ ತೀರ್ಮಾನ ತೆಗೆದುಕೊಳ್ಳುತ್ತಾರೆ” ಎಂದಿದ್ದಾರೆ.