ಬೆಂಗಳೂರು: ‘ಜ್ಞಾನಕ್ಕೆ ಸಮಾನವಾದುದು ಯಾವುದೂ ಇಲ್ಲ. ಜ್ಞಾನ ಯಾರಲ್ಲಿ ಇರುತ್ತದೆಯೋ ಅವರೇ ಶ್ರೀಮಂತರು. ಶಿಕ್ಷಣದಿಂದ ಮಾತ್ರ ಶಕ್ತಿ ಬರುತ್ತದೆ’ ಎಂದು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಕರ್ನಾಟಕದ ವಿವಿಧ ಶಾಲೆಗಳ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರಕ್ಷಾ ಫೌಂಡೇಷನ್ ವತಿಯಿಂದ 2 ಲಕ್ಷ ನೋಟ್ ಬುಕ್‌ಗಳನ್ನು ವಿತರಿಸಿದ ಸಮಾರಂಭದಲ್ಲಿ ಶನಿವಾರ ಅವರು ಮಾತನಾಡಿದರು.
ಸರ್ಕಾರಿ ಶಾಲೆಯ ಮಕ್ಕಳು ಹೆಚ್ಚು ಪ್ರತಿಭಾವಂತರಾಗಿದ್ದು, ಅವರಿಗೆ ಸರಿಯಾದ ಪ್ರೋತ್ಸಾಹ ದೊರಕಿದರೆ ಸಾಧಕರಾಗಿ ಬೆಳೆಯುತ್ತಾರೆ. ರಕ್ಷಾ ಫೌಂಡೇಷನ್‌ನಂಥ ಸಂಸ್ಥೆಗಳು ಈ ರೀತಿಯ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿವೆ ಎಂದು ಹೇಳಿದರು.
‘ಈ ಜಗದಲ್ಲಿ ಅನಾಥರು ಯಾರೂ ಇಲ್ಲ. ದೇವರು ಎಲ್ಲರನ್ನೂ ಕಾಪಾಡುತ್ತಾನೆ’ ಎಂದು ಹೇಳಿದ ನಟ ಕಿಚ್ಚ ಸುದೀಪ್, ‘ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪೊಲೀಸ್ ಸೇವೆಗೆ ಸೇರುತ್ತಿರುವುದು ಶ್ಲಾಘನಾರ್ಹ’ ಎಂದರು.