ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ (Petrol Diesel Price Hike) ಮಾಡಿ ರಾಜ್ಯ ಸರ್ಕಾರ ಆದೇಶ (Karnataka Govt) ಹೊರಡಿಸಿರುವ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ (R Ashok) ಕಿಡಿ ಕಾರಿದ್ದಾರೆ. ಬಿಜೆಪಿ 1 ರೂಪಾಯಿ ದರ ಹೆಚ್ಚಳ ಮಾಡಿದಾಗ ಇದೇ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ಪ್ರತಿಭಟನೆ ಮಾಡಿದರು.
ನಾವು ಅಧಿಕಾರಕ್ಕೆ ಬಂದ್ರೆ ಗ್ಯಾಸ್, ಪೆಟ್ರೋಲ್, ಡಿಸೇಲ್, ಗೊಬ್ಬರ ಬೆಲೆ ಕಡಿಮೆ ಮಾಡ್ತೀವಿ ಅಂದಿದ್ದರು. ಆದರೆ ಅವರೇ ಬೆಲೆ ಏರಿಕೆ ಭಾಗ್ಯ (Congress Guarantee) ಕೊಟ್ಟಿದ್ದಾರೆ. ಬೆಲೆ ಏರಿಕೆ ಮೂಲಕ ದರೋಡೆ ಮಾಡಲು ಹೊರಟಿದ್ದಾರೆ ಅಂತ ಹೇಳಿದರು.
ರಾಹುಲ್ ಗಾಂಧಿ ಹೇಳಿಕೆ ಬಗ್ಗೆಯೂ ಮಾತನಾಡಿದ ಆರ್.ಅಶೋಕ್, ಟಕಾಟಕ್ ಹಣ ಬ್ಯಾಂಕ್‌ಗೆ ಬೀಳುತ್ತೆ ಅಂದಿದ್ದರು. ಈಗ ಟಕಾಟಕ್ಕು ಇಲ್ಲ ಟಿಕಾ ಟಿಕ್ಕೂ ಇಲ್ಲ. ಈ ವಿಚಾರದ ಬಗ್ಗೆ ನಾಳೆ ನಾವು ರಾಜ್ಯಾದ್ಯಂತ ಹೋರಾಟ ಮಾಡ್ತೀವಿ. ಹಂತ ಹಂತವಾಗಿ ಕಾಂಗ್ರೆಸ್‌ನ ಜನವಿರೋಧಿ ನೀತಿಯನ್ನು ಜನರ ಮುಂದೆ ತೆಗೆದುಕೊಂಡು ಹೋಗ್ತೀವಿ ಅಂತ ಎಚ್ಚರಿಸಿದರು.
ಚೆಂಡು ಹೂ ಕೊಟ್ಟು ಸರ್ಕಾರದ ವಿರುದ್ಧ ಆಕ್ರೋಶ
ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡಿಸೆಲ್ ಬೆಲೆ ಏರಿಕೆ ಮಾಡಿ ನಿನ್ನೆಯಷ್ಟೇ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪೆಟ್ರೋಲ್ ಡಿಸೆಲ್ ಬೆಲೆ ಏರಿಕೆಯಾದ ಬೆನ್ನಲ್ಲೇ ಇಂದು ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ವಾಹನ ಸವಾರರಿಗೆ ದಾಸವಾಳ, ಚೆಂಡು ಹೂ ಕೊಟ್ಟು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಪ್ರತಿಭಟನೆಯಲ್ಲಿ ಪರಿಷತ್ ಸದಸ್ಯ ಸಿ.ಟಿ.ರವಿ ಸೇರಿ ಅನೇಕ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು. ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ,ಡಿಸೇಲ್ ಸೇರಿದಂತೆ ದಿನ ಬಳಕೆಯ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿದೆ. ಜನರೇ ಇವರಿಗೆ ತಕ್ಕ ಪಾಠ ಕಲಿಸುವ ದಿನ ದೂರವಿಲ್ಲ ಅಂತ ಹೇಳಿದರು.