ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶದ ಬೆನ್ನಲ್ಲೇ, ಅನರ್ಹ ಬಿಪಿಎಲ್ ರೇಶನ್ ಕಾರ್ಡ್‌ಗಳ ರದ್ದತಿ ಪ್ರಕ್ರಿಯೆಗೆ ಸರಕಾರ ಕೈಹಾಕಿದೆ. ಹೀಗೆ ರದ್ದು ಗೊಳ್ಳುವ ಕಾರ್ಡ್‌ಗಳ ಬದಲಿಗೆ ಬಿಪಿಎಲ್‌ಗಾಗಿ ವರ್ಷದಿಂದ ಕಾಯುತ್ತಿರುವ ಅರ್ಜಿದಾರರಿಗೆ ಅವಕಾಶ ಕಲ್ಪಿಸಲು ಮುಂದಾಗಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿ ಈಗಾಗಲೇ ಕೇಂದ್ರ ಸರಕಾರ ನಿಗದಿಪಡಿಸಿರುವ ಆದ್ಯತಾ ಪಡಿತರ ಕುಟುಂಬ (ಬಿಪಿಎಲ್)ಗಳು 1.03 ಕೋಟಿ ಹಾಗೂ ಅಂತ್ಯೋದಯ ಕುಟುಂಬಗಳು 10.83 ಲಕ್ಷ ಸೇರಿ 1.14 ಕೋಟಿ ಇರಬೇಕು. ಆದರೆ ರಾಜ್ಯದಲ್ಲಿ ಈಗಾಗಲೇ ಕೇಂದ್ರದ ಮಿತಿ ಮೀರಿ 10.33 ಲಕ್ಷ ಹೆಚ್ಚುವರಿ ಬಿಪಿಎಲ್ ಕುಟುಂಬಗಳಿದ್ದು, ಅವುಗಳಿಗೆ ರಾಜ್ಯ ಸರಕಾರವೇ ಪ್ರತಿ ತಿಂಗಳು ಸ್ವಂತ ಖರ್ಚಿನಿಂದ ಪಡಿತರ ಪೂರೈಸುತ್ತಿದೆ. ಈ ಮಧ್ಯೆ ಹೊಸದಾಗಿ ಲಕ್ಷಾಂತರ ಅರ್ಜಿಗಳು ಬಾಕಿ ಇವೆ. ಆದ್ದರಿಂದ ಅನರ್ಹರನ್ನು ಪತ್ತೆಹಚ್ಚುವ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಆರ್ಥಿಕವಾಗಿ ಸಬಲರಾಗಿದ್ದೂ ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿದ್ದರೆ ಅಥವಾ ಈ ಹಿಂದೆ ಬಿಪಿಎಲ್‌ನಲ್ಲಿದ್ದು, ಈಗ ಬಡತನ ರೇಖೆಯಿಂದ ಮೇಲೆ ಬಂದಿರುವವರನ್ನು ಪತ್ತೆ ಮಾಡಲು ಮುಂದಾಗಿದೆ. ಅಲ್ಲದೆ, ಬಿಪಿಎಲ್ ಕುಟುಂಬಗಳಲ್ಲಿ ಮೃತಪಟ್ಟವರ ಹೆಸರುಗಳನ್ನೂ ಅಳಿಸಲಾಗಿಲ್ಲ.
ಮೃತಪಟ್ಟವರ ಹೆಸರುಗಳನ್ನು ತೆಗೆದುಹಾಕಿದರೆ ಆಗ ಯೂನಿಟ್‌ಗಳು ಕಡಿಮೆಯಾಗಿ ಹೊರೆ ತಗ್ಗಲಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.