ಬೆಂಗಳೂರು: ಜಾತಿ ಪ್ರಮಾಣ ಪತ್ರ ಕೋರಿ ಸಲ್ಲಿಸುವ ಅರ್ಜಿಯನ್ನು ಒಪ್ಪುವ ಅಥವಾ ತಿರಸ್ಕರಿಸುವ ಅಧಿಕಾರ ಮಾತ್ರ ತಹಶೀಲ್ದಾರ್ ಹೊಂದಿದ್ದು, ಜಾತಿ ಪ್ರಮಾಣ ಪತ್ರ ರದ್ದುಪಡಿಸುವ ಅಧಿಕಾರವನ್ನು ಹೊಂದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಬೆಂಗಳೂರಿನ ಹಂಪಿ ನಗರದ ಬಿ. ಗುರುಪ್ರಸಾದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ನೀಡಿದೆ.
ಸ್ವತಂತ್ರ ವಿವೇಚನೆ ಬಳಸಿ ತಹಶಿಲ್ದಾರ್ ಜಾತಿ ಪ್ರಮಾಣ ಪತ್ರ ಕೋರಿ ಸಲ್ಲಿಸಿದ ಅರ್ಜಿ ತಿರಸ್ಕರಿಸಿದ ಕ್ರಮ ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನಡೆಸುವ ಅಧಿಕಾರವನ್ನು ಉಪ ವಿಭಾಗಾಧಿಕಾರಿ ಹೊಂದಿದ್ದಾರೆ. ಆದರೆ ಜಾತಿ ಪರಿಶೀಲನಾ ಸಮಿತಿಯ ನಿರ್ದೇಶನದ ಮೇರೆಗೆ ಜಾತಿ ಪ್ರಮಾಣ ರದ್ದುಪಡಿಸಿ ತಹಶೀಲ್ದಾರ್ ಹೊರಡಿಸಿದ ಆದೇಶ ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿ ವಿಚಾರಣೆ ನಡೆಸುವ ಅಧಿಕಾರ ಉಪವಿಭಾಗಾಧಿಕಾರಿಗಳಿಗಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ತಾನು ಪಡೆದುಕೊಂಡ ಪರಿಶಿಷ್ಟ ಜಾತಿ ಪಂಗಡ ಪ್ರಮಾಣ ಪತ್ರ ರದ್ದುಪಡಿಸಿದ್ದ ತಹಶೀಲ್ದಾರ್ ಕ್ರಮ ಪ್ರಶ್ನಿಸಿ ಬೆಂಗಳೂರಿನ ಬಿನ್ನಿಪೇಟೆ ನಿವಾಸಿ ಎಂ. ಗಾಯತ್ರಿ ಸಲ್ಲಿಸಿದ್ದ ಮೇಲ್ಮನವಿ ಬಗ್ಗೆ ಬೆಂಗಳೂರು ಉತ್ತರ ವಿಭಾಗದ ಉಪ ವಿಭಾಗಾಧಿಕಾರಿ ಮುಂದಿದ್ದ ಪ್ರಕ್ರಿಯೆಯನ್ನು ನ್ಯಾಯಪೀಠ ರದ್ದುಪಡಿಸಿದೆ. ಪ್ರಕರಣ ಸಂಬಂಧ ಕಾನೂನು ಪ್ರಕಾರ ಪರಿಹಾರ ಪಡೆಯಲು ಅರ್ಜಿದಾರರು ಮತ್ತು ಪ್ರತಿವಾದಿ ಗಾಯತ್ರಿ ಅವರಿಗೆ ಮುಕ್ತ ಅವಕಾಶವಿದೆ ಎಂದು ತಿಳಿಸಿದೆ.