ಶಿವಮೊಗ್ಗ: ಜಿಲ್ಲೆಯಲ್ಲಿ ಇಲ್ಲಿಯವರೆಗೆ 55,733 ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ನಂಬರ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಕೆ ಮಾಡಲಾಗಿದೆ.
2019ರ ಏಪ್ರಿಲ್ 1ಕ್ಕಿಂತ ಮುಂಚೆ ಖರೀದಿಸಲಾದ ವಾಹನಗಳು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಬೇಕಿದೆ.
ಬೈಕ್, ಕಾರು, ಆಟೋ ಮತ್ತು ಲಾರಿ ಸೇರಿದಂತೆ ಎಲ್ಲ ವಾಹನಗಳಿಗೆ ಅಳವಡಿಸುವುದು ಕಡ್ಡಾಯವಾಗಿದೆ. ಹೀಗಾಗಿಯೇ ವಾಹನ ಸವಾರರು ನಂಬರ್ ಪ್ಲೇಟ್ ಬದಲಿ ಮಾಡಿಸುವಲ್ಲಿ ನಿರತರಾಗಿದ್ದಾರೆ.
ಆನ್‌ಲೈನ್ ಮೂಲಕ ಎಚ್‌ಎಸ್‌ಆರ್‌ಪಿ ನೋಂದಣಿ ಮಾಡಿಸಿ ಶುಲ್ಕ ಕಟ್ಟಿ ವಾಹನ ಉತ್ಪಾದಕ ಕಂಪನಿಯ ಹೆಸರು ನಮೂದಿಸಬೇಕು. ಇದಾದ ಮೇಲೆ ಡೀಲರ್ ಲೊಕೇಶನ್ ಆಯ್ಕೆ ಮಾಡಿಕೊಳ್ಳಬೇಕಿದೆ. ನಂತರ ವಾಹನ ಮಾಲೀಕರ ಮೊಬೈಲ್ ಫೋನ್ ನಂಬರ್‌ಗೆ ಒಟಿಪಿ ಬರುತ್ತದೆ. ಮಾಲೀಕರು ಸಮಯಾವಕಾಶ ನೋಡಿಕೊಂಡು ನಂಬರ್ ಪ್ಲೇಟ್‌ನ್ನು ವಾಹನಕ್ಕೆ ಜೋಡಿಸಲು ದಿನಾಂಕ ಮತ್ತು ಸಮಯ ಆಯ್ಕೆ ಮಾಡಿಕೊಳ್ಳಬೇಕು. ನಂತರ ವಾಹನ ಮಾಲೀಕರು ನಿಗದಿ ಮಾಡಿ ಅಂಗೀಕೃತವಾದ ದಿನಾಂಕ ಮತ್ತು ಸಮಯಕ್ಕೆ ವಾಹನ ಉತ್ಪಾದಕರು ಅಥವಾ ಡೀಲರ್ ಬಳಿ ಹೋಗಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ವಾಹನಗಳಿಗೆ ಅಳವಡಿಸಬಹುದು.