ಬೆಂಗಳೂರು: ಸಂಸತ್ತು ಮತ್ತು ನಿಮ್ಮ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಿರಬೇಕು. ಜನರ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ದನಿ ಎತ್ತಬೇಕು. ಯಾವುದೇ ಹೇಳಿಕೆಗಳು ಪಕ್ಷದ ಚೌಕಟ್ಟಿನಲ್ಲಿರಬೇಕೇ ಹೊರತು, ವೈಯಕ್ತಿಕವಾಗಿರಬಾರದು – ಇದು ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ ಕಾಂಗ್ರೆಸ್‌ನ ನೂತನ ಸಂಸದರಿಗೆ ಪಕ್ಷದ ವರಿಷ್ಠ ರಾಹುಲ್ ಗಾಂಧಿ ನೀಡಿದ ಪಾಠ ಇದು.
ಶುಕ್ರವಾರ ಖುದ್ದು ಬೆಂಗಳೂರು ನ್ಯಾಯಾಲಯಕ್ಕೆ ಹಾಜರಾದ ಬಳಿಕ ರಾಹುಲ್ ಗಾಂಧಿ, ಲೋಕಸಭಾ ಚುನಾವಣೆಯಲ್ಲಿ ಸೋತ ಮತ್ತು ಗೆದ್ದ ಅಭ್ಯರ್ಥಿಗಳೊಂದಿಗೆ ಫಲಿತಾಂಶದ ಪರಾಮರ್ಶೆ ನಡೆಸಿದರು.
ಆಯ್ಕೆಯಾದವರಲ್ಲಿ ಕೆಲವರು ಹೊಸಬರಿದ್ದೀರಿ. ಸಂಸತ್ತಿನಲ್ಲಿ ಕ್ಷೇತ್ರದ್ದು ಸಹಿತ ಗಂಭೀರ ಸಮಸ್ಯೆಗಳ ಮೇಲೆ ಬೆಳಕುಚೆಲ್ಲಬೇಕು. ಪ್ರಮುಖ ಚರ್ಚೆ ಗಳಲ್ಲಿ ಭಾಗವಹಿಸಬೇಕು. ಭವಿಷ್ಯದ ದೃಷ್ಟಿಯಿಂದ ಜನರ ಮಧ್ಯೆ ಇದ್ದು ಕೆಲಸ ಮಾಡಬೇಕು. ಪಕ್ಷದ ಚೌಕಟ್ಟಿನಲ್ಲಿ ಹೇಳಿಕೆಗಳನ್ನು ನೀಡಬೇಕು. ನಿಮ್ಮ ವೈಯಕ್ತಿಕ ನೆಲೆಗಟ್ಟಿನಲ್ಲಿ ಹೇಳಿಕೆಗಳನ್ನು ನೀಡಬಾರದು. ಉತ್ತಮವಾಗಿ ಕಾರ್ಯ ನಿರ್ವಹಿಸುವ ಮೂಲಕ ಜನ ಮನ್ನಣೆ ಪಡೆಯಬೇಕು ಎಂದರು.