ಚಂಡೀಗಢ: ಸದಾ ತಮ್ಮ ಹೇಳಿಕೆಗಳ ಮೂಲಕವೇ ಸುದ್ದಿಯಲ್ಲಿರುವ ಬಾಲಿವುಡ್ ನಟಿ, ಮಂಡಿ ಲೋಕಸಭಾ ಕ್ಷೇತ್ರದ ಸಂಸದೆ ಕಂಗನಾ ರಣಾವತ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.
ರೈತರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ CISF ಮಹಿಳಾ ಪೇದೆ ನೂತನ ಸಂಸದೆಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಪಾಳಕ್ಕೆ ಹೊಡೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಂಗನಾ ಮೇಲೆ ಹಲ್ಲೆ ನಡೆಸಿರುವ ಪೇದೆ ಹೆಸರು ಕುಲ್ವಿಂದರ್ ಕೌರ್ ಎಂದು ಗುರುತಿಸಲಾಗಿದ್ದು, ಕಂಗನಾ ರೈತರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಚಂಡೀಗಢದಿಂದ ದೆಹಲಿಯತ್ತ ಪ್ರಯಾಣ ಮಾಡುವಾಗ ಈ ಘಟನೆ ನಡೆದಿದ್ದು, ತನಿಖೆ ನಡೆಸಲು CISF ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ನಟಿ ಕಂಗನಾ ಕಚೇರಿ ಸಿಬ್ಬಂದಿ, ಚೆಕ್ಕಿಂಗ್ ನಂತರ ಬೋರ್ಡಿಂಗ್ ಪಾಯಿಂಟ್ನತ್ತ ತೆರಳುವಾಗ ಕುಲ್ವಿಂದರ್ ಕೌರ್ ಎಂಬ ಅಧಿಕಾರಿಯು ನೀವು ರೈತರಿಗೆ ಅವಮಾನ ಮಾಡಿದ್ದೀರಾ ಎಂದು ಆರೋಪಿಸಿ ಕಂಗನಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಹಲ್ಲೆ ಸಂಬಂಧಿ CISF ನಿರ್ದೇಶಕ ನೀನಾ ಸಿಂಗ್ ಅವರಿಗೆ ದೂರು ನೀಡಲಾಗಿದ್ದು, ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ತನಿಖೆಗೆ ಆದೇಶಿಸಿದ್ದಾರೆ ಎಂದು ಕಂಗನಾ ಕಚೇರಿ ಸಿಬ್ಬಂದಿ ತಿಳಿಸಿದ್ದಾರೆ.