ಗೋಕಾಕ: ಅತಿ ಕಡಿಮೆ ವಯಸ್ಸಿನಲ್ಲಿ ಸಂಸತ್ತಿಗೆ ಆಯ್ಕೆಯಾಗಿದ್ದಕ್ಕೆ ಬಹಳ ಖುಷಿಯಾಗುತ್ತಿದ್ದು ಈ ಆಯ್ಕೆಗೆ ಕಾರಣರಾದ ಮತದಾರರಿಗೆ, ಸಹಕರಿಸಿದ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಚಿರಋಣಿಯಾಗಿದ್ದೇನೆ ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ನೂತನ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅತ್ಯಂತ ಕಡಿಮೆ ಸಮಯದಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಮತದಾರರನ್ನು ಭೇಟಿಯಾಗಿ ಮತಯಾಚನೆ ಮಾಡುವುದು ಸವಾಲಿನ ಕಾರ್ಯವಾಗಿತ್ತು. ಆದರೆ ತಂದೆಯ ಮಾರ್ಗದರ್ಶನ, ಸಹೋದರನ ಸಹಕಾರ, ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳ ಹಗಲಿರುಳು ಪರಿಶ್ರಮದಿಂದ ಇದು ಸಾಧ್ಯವಾಗಿತ್ತು. ಕಾಂಗ್ರೆಸ್ ಪಕ್ಷದ ಶಾಸಕರ ಸಹಕಾರದಿಂದ ನನ್ನ ಗೆಲುವು ಸುಲಭವಾಗಿದೆ.
ತಂದೆ ಸತೀಶ ಜಾರಕಿಹೊಳಿ ಮತ್ತು ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ಚಿಕ್ಕೋಡಿಯಲ್ಲಿ ವಕೌìಟ್ ಆಗಿವೆ. ರಾಹುಲ್ ಗಾಂಧಿ ಅವರಂತಹ ಮಹಾನ್ ನಾಯಕರು ಸಂಸತ್ತಿನಲ್ಲಿ ಇರುವುದರಿಂದ ನಾನು ತುಂಬ ಕಾತುರದಿಂದ ಸಂಸತ್ ಪ್ರವೇಶಕ್ಕಾಗಿ ಕಾಯುತ್ತಿದ್ದೇನೆ. ಪಕ್ಷದ ವರಿಷ್ಠರಿಂದ ಕರೆ ಬಂದಾಗ ದೆಹಲಿಗೆ ಹೋಗುತ್ತೇನೆ ಎಂದರು.