ಬೆಳಗಾವಿ: ಬೆಳಗಾವಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ನಾನು ಕಾರಣವಲ್ಲ ಎಂದು ಗೋಕಾಕ ನಗರದಲ್ಲಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. “ಐದು ಲಕ್ಷ ಲಿಂಗಾಯತ ಮತದಾರರು ಬೆಳಗಾವಿಯಲ್ಲಿದ್ದಾರೆ, ಅವರೇನು ನನ್ನ ಮಾತು ಕೇಳ್ತಾರಾ?
ಬೆಳಗಾವಿ ಕ್ಷೇತ್ರದ (Belagavi Election Results) ಮತದಾರರನ್ನು ಅಸೆಸ್ ಮಾಡುವಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಫಲರಾದರು. ಇದೇ ಬೆಳಗಾವಿ ಕ್ಷೇತ್ರದ ಕಾಂಗ್ರೆಸ್ ಸೋಲಿಗೆ ಕಾರಣವಾಯಿತು. ಈ ಸಲ ನಾವು ಗೆಲ್ಲುವ ನಿಟ್ಟಿನಲ್ಲಷ್ಟೇ ಕೆಲಸ ಮಾಡಿದ್ದೇವೆಯೇ ಹೊರತು, ಸೋಲಿಸಲು ಅಲ್ಲ” ಎಂದು ಅವರು ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಕಳಪೆ ಸಾಧನೆ ಬಗ್ಗೆ ಪರೋಕ್ಷವಾಗಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧವೂ ಸತೀಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಥಣಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಕಡಿಮೆ ಲೀಡ್ ಸಿಕ್ಕಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಸ್ವಪಕ್ಷಿಯದವರ ವಿರುದ್ದ ತಿರುಗಿಬಿದ್ದಿದ್ದಾರೆ.
ಬಿಜೆಪಿಯಿಂದ ಕಾಂಗ್ರೆಸ್‌ಗೆ ಆಗಮಿಸಿದ ನಾಯಕರಿಂದ ಪ್ರಯೋಜನ ಆಗದ ಬಗ್ಗೆ ಮಾತನಾಡಿದ ಅವರು, ನಮ್ಮವರೇ ನಮಗೆ ಮೋಸ ಮಾಡಿದ್ರು. ಅಥಣಿಯಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದವರಿಂದ ಚುನಾವಣೆಯಲ್ಲಿ ಮೋಸ ಆಗಿದೆ. ಮೊದಲೇ ಅವರು ಮೈಂಡ್ ಸೆಟ್ ಮಾಡಿಕೊಂಡಿದ್ರು. ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಮ್ಮ ಪರವಾಗಿ ಇದ್ರು ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.