ವಾಷಿಂಗ್ಟನ್, ನ.18- ಅಮೆರಿಕದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಜೋಬಿಡೆನ್ ನೇತೃತ್ವದ ಸರ್ಕಾರದಲ್ಲಿ ಮಂಡ್ಯದ ಡಾ.ವಿವೇಕ್ ಮೂರ್ತಿ ಆರೋಗ್ಯ ಸಚಿವರಾಗುವುದು ಬಹುತೇಕ ಖಚಿತವಾಗಿದೆ. ಅಮೆರಿಕದ ಮಾಜಿ ಸರ್ಜನ್ ಜನರಲ್ ಆಗಿರುವ 43 ವರ್ಷದ ಡಾ.ವಿವೇಕ್ ಮೂರ್ತಿ ಮೊದಲಿನಿಂದಲೂ ಜೋಬಿಡೆನ್ ಅವರಿಗೆ ಪರಮಾಪ್ತರು.
ಅಲ್ಲದೆ ಅಮೆರಿಕದ ಚುನಾಯಿತ ಅಧ್ಯಕ್ಷ ಬಿಡೆನ್ ಅವರಿಗೆ ಆಪ್ತ ಸಲಹೆಗಾರರಾಗಿರುವ ಅಗ್ರಮಾನ್ಯರಲ್ಲಿ ಡಾ.ಮೂರ್ತಿ ಅವರು ಸಹ ಒಬ್ಬರು. ಅಲ್ಲದೆ ಪ್ರಸ್ತುತ ಕೋವಿಡ್ ನಿಯಂತ್ರಣಕ್ಕಾಗಿ ಬಿಡೆನ್ ರಚಿಸಿರುವ ಸಲಹಾ ಸಮಿತಿಯ ಮೂವರು ಖ್ಯಾತ ಸಹ ಅಧ್ಯಕ್ಷರಲ್ಲಿ ಡಾ.ಮೂರ್ತಿ ಅವರು ಸಹ ಒಬ್ಬರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಮೆರಿಕದ ಹೊಸ ಸಂಪುಟದಲ್ಲಿ ವಿವೇಕ್ ಮೂರ್ತಿ ಅವರಿಗೆ ಆರೋಗ್ಯ ಮತ್ತು ಮಾನವ ಸೇವೆ ಕಾರ್ಯದರ್ಶಿ (ಸಚಿವ) ಸ್ಥಾನ ಲಭಿಸುವುದು ಬಹುತೇಕ ಖಚಿತ ಎಂದು ವಾಷಿಂಗ್ಟನ್ ಫೋಸ್ಟ್, ನ್ಯೂಯಾರ್ಕ್ ಟೈಂ ಮತ್ತು ಪೊಲಿಟಿಕೋ ವಾರ್ತಾ ಪತ್ರಿಕೆಗಳು ವರದಿ ಮಾಡಿವೆ. ಇವರಲ್ಲದೆ ಸ್ಟಾನ್‍ಫೋರ್ಡ್ ಯೂನಿವರ್ಸಿಟಿಯ ಪ್ರೊಫೆಸರ್ ಭಾರತೀಯ ಮೂಲದ ಅರುಣ್ ಮಜುಂದಾರ್ ಅವರಿಗೆ ಇಂಧನ ಖಾತೆ ನೀಡುವುದು ಸಹ ಬಹುತೇಕ ಖಚಿತವಾಗಿದೆ.
ಅಮೆರಿಕದ ಖ್ಯಾತ ತಂತ್ರ ಶಿಲ್ಪಿಗಳಲ್ಲಿ ಒಬ್ಬರಾದ ಡಾ.ಅರುಣ್ ಮಜುಂದಾರ್ ಪ್ರಸ್ತುತ ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರ್ ವಿಭಾಗದ ಮುಖ್ಯಸ್ಥರು ಮತ್ತು ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲದೆ ಅಮೆರಿಕದ ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಭಾರತೀಯ ಮೂಲದವರಿಗೆ ಬಿಡೆನ್ ಆದ್ಯತೆ ನೀಡಲಿದ್ದಾರೆ.
Laxmi News 24×7