ಅಯೋಧ್ಯೆ: ಇಂದು (ಬುಧವಾರ) ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಸರ್ವಾಲಂಕೃತ ಬಾಲರಾಮನ ಹಣೆಗೆ ಸೂರ್ಯ ರಶ್ಮಿ ಸ್ಪರ್ಶಿಸಿದ್ದು, ಸುಮಾರು 4 ನಿಮಿಷಗಳ ಕಾಲ ಸೂರ್ಯ ರಶ್ಮಿ ತಿಲಕದಂತೆ ರಾಮನ ಹಣೆಮೇಲೆ ಕಂಗೊಳಿಸಿತು.
ಕಳೆದ ವಾರ ಬಾಲರಾಮನ ಹಣೆಗೆ ಸೂರ್ಯ ತಿಲಕವಿಡುವ ಪ್ರಯೋಗ ಮಾಡಲಾಗಿತ್ತು.
ಇದು ಯಶಸ್ವಿಯಾಗಿತ್ತು. ಇಂದು ರಾಮ ಜನಿಸಿದ ಸಮಯಕ್ಕೆ ಸರಿಯಾಗಿ ಸೂರ್ಯನ ಕಿರಣ ಹಣೆಯನ್ನು ಸ್ಪರ್ಶಿಸಿದೆ.
58 ಮಿ.ಮೀ. ಗಾತ್ರದ ಸೂರ್ಯ ರಶ್ಮಿಯು ಬಾಲರಾಮನ ಹಣೆಯ ಕೇಂದ್ರದಲ್ಲಿ ಸುಮಾರು ಮೂರರಿಂದ ಮೂರೂವರೆ ನಿಮಿಷಗಳ ಕಾಲ ಬೆಳಗಿದೆ ಎಂದು ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

ವಿಭಿನ್ನ ತಂತ್ರಜ್ಞಾನ
ರಾಮ ಮಂದಿರದ ಮೂರನೇ ಮಹಡಿಯಲ್ಲಿ ಆಪ್ಟಿಕಲ್ ಲೆನ್ಸ್‌ವೊಂದನ್ನು ಅಳವಡಿಸಲಾಗಿದ್ದು, ಅದು ಪೈಪ್‌ಗಳಲ್ಲಿ ಅಳವಡಿಸಿರುವ ರಿಫ್ಲೆಕ್ಟರ್‌ಗಳ ಮೂಲಕ ಬೆಳಕನ್ನು ವಿಗ್ರಹದ ಹಣೆಯ ಮೇಲೆ ಮೂಡಿಸಿದೆ
ಭಾರತೀಯ ಖಭೌತವಿಜ್ಞಾನ ಸಂಸ್ಥೆಯ ನೆರವಿನಿಂದ ಈ ತಂತ್ರಜ್ಞಾನ ಅಭಿವೃದ್ದಿಪಡಿಸಲಾಗಿದೆ. ಸೂರ್ಯನು ನಿರ್ದಿಷ್ಟ ದಿನದಂದು ಯಾವ ಜಾಗದಲ್ಲಿ ಇರುವನು ಎಂಬುದನ್ನು ನೋಡಿಕೊಂಡು ‘ಸೂರ್ಯ ತಿಲಕ’ಕ್ಕೆ ಅಗತ್ಯವಿರುವ ಮಸೂರಗಳನ್ನು ರಾಮಮಂದಿರದಲ್ಲಿ ಅಳವಡಿಸಲಾಗಿದೆ.
ರಾಮನವಮಿ ಹಿನ್ನೆಲೆ ಅಯೋಧ್ಯೆಯಲ್ಲಿ ಸಾವಿರಾರು ಭಕ್ತರು ಆಗಮಿಸಿದ್ದಾರೆ.
Laxmi News 24×7