ವಿಜಯಪುರ: ದೇಶದಲ್ಲಿ ಪ್ರಜ್ಞಾವಂತ ಮತದಾರರಿದ್ದು, ಲೋಕಸಭೆಗೆ ಯಾರಿಗೆ ಮತ ಹಾಕಬೇಕು, ವಿಧಾನಸಭೆಗೆ ಏನು ನಿರ್ಣಯ ಕೈಗೊಳ್ಳಬೇಕು ಎಂಬುದು ಅವರಿಗೆ ಗೊತ್ತಿದೆ. ಹತ್ತು ವರ್ಷಗಳ ಆಡಳಿತದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ನೋಡಿ ಮೋದಿ ನೇತೃತ್ವದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಭಾರತ ವಿಶ್ವದ ಆರ್ಥಿಕ ಮುಂಚೂಣಿಯ 5ನೇ ರಾಷ್ಟ್ರವಾಗಿ ಹೊರ ಹೊಮ್ಮಿದೆ. ಬರುವ ಐದು ವರ್ಷಗಳಲ್ಲಿ ಮೋದಿ ಪ್ರಧಾನಿಯಾಗಲಿದ್ದು, ಭಾರತ ಆರ್ಥಿಕ ಮೂರನೇ ಶಕ್ತಿಯುವ ದೇಶವಾಗಿ ನಿಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಜಯಪುರ ಕ್ಷೇತ್ರದಲ್ಲಿ ರಮೇಶ ಜಿಗಜಿಣಗಿ ನಾಮಪತ್ರ ಸಲ್ಲಿಸಿದ್ದು, ಕನಿಷ್ಟ 2 ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದೇವೆ. ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಎಷ್ಟು ಶಾಸಕರು ಪಕ್ಷದವರಿದ್ದಾರೆ ಎಂಬುದು ಮುಖ್ಯವಲ್ಲ. ಗೆಲ್ಲುವುದು ಮುಖ್ಯವಾಗಿದ್ದು, ಪ್ರಜ್ಞಾವಂತ ಮತದಾರರ ಬಿಜೆಪಿ ಪಕ್ಷವನ್ನು ಗೆಲ್ಲಿಸಲಿದ್ದಾನೆ ಎಂದರು.
1999 ರಲ್ಲಿ ಮೊದಲ ಬಾರಿಗೆ ನಾನು ಸಂಸದನಾಗಿ ಇಲ್ಲಿ ಆಯ್ಕೆಯಾದ ನಂತರದಿಂದ ಈವರೆಗೆ ಇಲ್ಲಿ ಬಿಜೆಪಿ ನಿರಂತರ ಗೆಲ್ಲು ಬಂದಿದೆ. ನಿರಂತರವಾಗಿ ಹೆಚ್ಚು ಮತಗಳನ್ನು ಪಡೆಯುತ್ತಲೇ ಬಿಜೆಪಿ ಗೆಲ್ಲುತ್ತ ಬಂದಿದ್ದು, ಜಿಗಜಿಣಗಿ ಆಯ್ಕೆ ಖಚಿತವಾಗಿದೆ ಎಂದರು