ಬೆಂಗಳೂರು: ಜಾಲಹಳ್ಳಿಯಲ್ಲಿ ಬುಧವಾರ ಮುಂಜಾನೆ ಇಬ್ಬರು ಮಕ್ಕಳನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ ತಾಯಿ, ಬಳಿಕ ಪೊಲೀಸರಿಗೆ ಕರೆ ಶರಣಾಗಿದ್ದಾಳೆ.
ಭೋವಿ ಕಾಲೊನಿ ನಿವಾಸಿ ಗಂಗಾದೇವಿ(30) ಪೊಲೀಸ್ ಠಾಣೆಗೆ ಶರಣಾದ ಮಹಿಳೆ.
ಆರೋಪಿ ಮಹಿಳೆ ತನ್ನ ಮಕ್ಕಳಾದ ಲಕ್ಷ್ಮಿ(7) ಹಾಗೂ ಗೌತಮ್(9)ನನ್ನು ಕೊಲೆ ಮಾಡಿದ್ದಾಳೆ.
ಕೌಟುಂಬಿಕ ಕಲಹದಿಂದ ಮಕ್ಕಳನ್ನು ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿ ಮಹಿಳೆ ಹೇಳಿದ್ದಾಳೆ’ ಎಂದು ಪೊಲೀಸರು ಹೇಳಿದರು.
ಆಂಧ್ರಪ್ರದೇಶದ ಗಂಗಾದೇವಿ 10 ವರ್ಷಗಳ ಹಿಂದೆ ನರೇಶ್ ಅವರನ್ನು ಮದುವೆ ಆಗಿದ್ದಳು. ದಂಪತಿಗೆ ಇಬ್ಬರು ಮಕ್ಕಳಿದ್ದರು. ನರೇಶ್ ಈ ಹಿಂದೆ ಬಿಬಿಎಂಪಿಯಲ್ಲಿ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ನಂತರ ಕೆಲಸ ಬಿಟ್ಟಿದ್ದ. ಈಕೆ ಖಾಸಗಿ ಕಂಪನಿಯೊಂದರ ಮಾರುಕಟ್ಟೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಳು.
‘ಪುತ್ರಿಯ ಜೊತೆಗೆ ನರೇಶ್ ಅಸಭ್ಯವಾಗಿ ವರ್ತಿಸುತ್ತಿರುವುದಾಗಿ ಆರೋಪಿಸಿ, 2022ರ ಮಾರ್ಚ್‌ನಲ್ಲಿ ಗಂಗಾದೇವಿ ದೂರು ನೀಡಿದ್ದಳು. ಆತನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದರು. ಸದ್ಯ ನರೇಶ್ ಜೈಲಿನಲ್ಲಿದ್ದಾನೆ.’
ಜೈಲು ಸೇರಿದ್ದ ಪತಿ:
ಪತಿ ಜೈಲು ಸೇರಿದ ಮೇಲೆ ಇಬ್ಬರು ಮಕ್ಕಳ ವಿದ್ಯಾಭ್ಯಾಸ, ಕೌಟುಂಬಿಕ ನಿರ್ವಹಣೆಯನ್ನು ಮಹಿಳೆಯೇ ಮಾಡುತ್ತಿದ್ದಳು. ಮನೆಯಲ್ಲಿ ವೃದ್ಧೆ ತಾಯಿ ಸಹ ಇದ್ದರು. ಜೀವನ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಅಕ್ಕಪಕ್ಕದ ಮನೆಯವರ ಬಳಿ ಆಕೆ ಹೇಳಿಕೊಂಡಿದ್ದಳು ಎನ್ನಲಾಗಿದೆ. ಮಂಗಳವಾರ ಯುಗಾದಿ ಹಬ್ಬದ ಪ್ರಯುಕ್ತ ಮನೆಯಲ್ಲಿ ಹಬ್ಬ ಆಚರಿಸಿ, ಮಕ್ಕಳ ಜತೆ ಊಟ ಮಾಡಿದ್ದಾಳೆ. ಮಕ್ಕಳು ನಿದ್ರೆ ಮಾಡಿದ ಮೇಲೆ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ಹೇಳಿದರು.
ಬುಧವಾರ ಮುಂಜಾನೆ 4.30ರ ಸುಮಾರಿಗೆ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ ಗಂಗಾದೇವಿ, ಕೃತ್ಯದ ಬಗ್ಗೆ ಮಾಹಿತಿ ನೀಡಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಳು. ತಕ್ಷಣವೇ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಇಬ್ಬರೂ ಮಕ್ಕಳನ್ನು ಕೊಲೆ ಮಾಡಲಾಗಿತ್ತು. ಆರೋಪಿಯನ್ನು ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ.