ಬೆಂಗಳೂರು: ಕೋಲಾರ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಉಂಟಾದ ಗೊಂದಲದಿಂದ ಮುಂದೂಡಲ್ಪಟ್ಟಿದ್ದ ಕಾಂಗ್ರೆಸ್‌ನ ಲೋಕಸಭಾ ಚುನಾವಣ ಪ್ರಚಾರ ಕಾರ್ಯಕ್ರಮ ಶನಿವಾರ (ಎ. 6) ನಿಗದಿಯಾಗಿದ್ದು, ಅಂದು ಕುರುಡುಮಲೆ ದೇವಸ್ಥಾನದಿಂದ “ಪ್ರಜಾಧ್ವನಿ-2’ಕ್ಕೆ ಚಾಲನೆ ದೊರೆಯಲಿದೆ.
ಅಂದು ಬೆಳಗ್ಗೆ 10.30ಕ್ಕೆ ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿರುವ ಕುರುಡುಮಲೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಚುನಾವಣ ಪ್ರಚಾರಕ್ಕೆ ಕೆಪಿಸಿಸಿ ಅಧಿಕೃತ ಚಾಲನೆ ನೀಡಲಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಪಕ್ಷದ ಹಿರಿಯ ನಾಯಕರು ಭಾಗವಹಿಸಲಿದ್ದಾರೆ.
ಈ ಮೊದಲು ಮಾ.29ರಂದು ಮುಳಬಾಗಿಲಿನ ಕುರುಡುಮಲೆ ಹಾಗೂ ಮಾ.30ರಂದು ಹಾಸನದ ಹೊಳೆನರಸೀಪುರದಿಂದ “ಪ್ರಜಾಧ್ವನಿ-2’ಕ್ಕೆ ಚಾಲನೆ ನೀಡಲು ಕಾಂಗ್ರೆಸ್ ಉದ್ದೇಶಿಸಿತ್ತು. ಈ ಸಂಬಂಧ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿದ್ದವು. ಆದರೆ ಕೋಲಾರದಲ್ಲಿ ಪಕ್ಷದ ನಾಯಕರ ಭಿನ್ನಮತ ಸ್ಫೋಟಗೊಂಡು, ಅದು ರಾಜೀನಾಮೆ ಪ್ರಹಸನಕ್ಕೂ ತಲುಪಿದ್ದ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯಕ್ರಮ ಮುಂದೂಡಿಕೆಯಾಗಿತ್ತು.