ಅಡಹಳ್ಳಿ: ಮಳೆ ಕೊರತೆ ಹಾಗೂ ಬಿಸಿಲಿನ ಹೊಡೆತಕ್ಕೆ ಹಿಪ್ಪರಗಿ ಅಣೆಕಟ್ಟೆ ಕೆಳಭಾಗದ ಅಥಣಿ ತಾಲೂಕಿನಲ್ಲಿ ಕೃಷ್ಣಾ ನದಿ ಸಂಪೂರ್ಣ ಬರಿದಾಗಿದ್ದು, ನೀರಿಲ್ಲದೇ ರಾಶಿ, ರಾಶಿ ಮೀನುಗಳ ಮಾರಣ ಹೋಮವಾಗಿದೆ.
ಅಥಣಿ ತಾಲೂಕಿನ ಕೃಷ್ಣಾ ನದಿ ತೀರದ ಸವದಿ, ಶಿರಹಟ್ಟಿ, ಬಳವಾಡ, ಝುಂಜರವಾಡ ಸೇರಿದಂತೆ ತಾಲೂಕಿನ ಪೂರ್ವ ಭಾಗದ ಹಲವಾರು ಗ್ರಾಮಗಳಲ್ಲಿ ನೀರಿನ ಹಾಹಾಕಾರ ಆರಂಭವಾಗಿದೆ.
ಮಳೆಗಾಲ ಆರಂಭವಾಗಲು ಎರಡೂವರೆ ತಿಂಗಳು ಬಾಕಿ ಇದ್ದು, ಈಗಲೇ ನೀರಿನ ಸಮಸ್ಯೆ ಶುರುವಾಗಿದೆ. ಜನ-ಜಾನುವಾರುಗಳ ಗತಿ ಏನು ಎಂಬುದರ ಚಿಂತೆ ಹೆಚ್ಚಾಗಿದೆ.
ತಾಲೂಕಿನಲ್ಲಿರುವ ಜಲಮೂಲಗಳಾದ ಕೆರೆ, ಕೊಳವೆಬಾವಿ, ಬಾವಿ, ಬೋರ್‌ವೆಲ್‌ಗಳು ಕೂಡ ಬತ್ತಿವೆ. ಈಗ ಝುಂಜರವಾಡ, ಶಿರಹಟ್ಟಿ ಗ್ರಾಮದಲ್ಲಿರುವ ಕೃಷ್ಣಾ ನದಿ ನೀರು ಬತ್ತುತ್ತಿದ್ದಂತೆ ಲಕ್ಷಾಂತರ ಮೀನುಗಳು ಮೃತಪಟ್ಟಿವೆ.
ದುರ್ವಾಸನೆಯಿಂದ ಗ್ರಾಮಸ್ಥರಿಗೆ ಸಾಕಾಗಿ ಹೋಗಿದೆ. ಒಟ್ಟು 6 ಟಿಎಂಸಿ ಸಾಮರ್ಥ್ಯ ಹೊಂದಿರುವ ಹಿಪ್ಪರಗಿ ಜಲಾಶಯದಲ್ಲಿ ಸದ್ಯ 1ಟಿಎಂಸಿ ನೀರು ಮಾತ್ರ ಸಂಗ್ರಹವಿದ್ದು. ಅಧಿ ಕಾರಿಗಳ ಮಾಹಿತಿ ಪ್ರಕಾರ ಒಂದು ತಿಂಗಳು ಮಟ್ಟಿಗೆ ಸಾಕಾಗುತ್ತದೆ. ಅಥಣಿ ತಾಲೂಕಿನಲ್ಲಿ ಬರದ ಛಾಯೆ ಆವರಿಸಿದ್ದು. ತಾಲೂಕಾಡಳಿತ ಬರ ಎದುರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ತಾಲೂಕಾಡಳಿತ ಹೊಸ ಕೊಳವೆ ಬಾವಿ ಕೊರೆಯಿಸುವುದರ ಜತೆಗೆ ಇತರ ಸಂಪನ್ಮೂಲ ಬಳಸಿ ನೀರಿನ ವ್ಯವಸ್ಥೆ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕು.