ಹುಬ್ಬಳ್ಳಿ : ಬಿಜೆಪಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಧಾರವಾಡ ಕ್ಷೇತ್ರದ ಅಭ್ಯರ್ಥಿಯಾಗಿ ಅನಿವಾರ್ಯವಾದರೆ, ನನಗೆ ಅವರಿಂದ ತುಳಿತಕ್ಕೆ ಒಳಗಾದ ಸಮಾಜಗಳ ಬೆನ್ನಿಗೆ ನಿಲ್ಲುವುದು ನನಗೆ ಅನಿವಾರ್ಯ. ನನ್ನ ನಿಲುವು ಸ್ಪಷ್ಟವಾಗಿದ್ದು, ಏಪ್ರಿಲ್ 2 ರಂದು ನಮ್ಮ ಭಕ್ತರ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಾಲೆಹೊಸೂರು-ಶಿರಹಟ್ಟಿ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮಿ ಸ್ಪಷ್ಟಪಡಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿಯನ್ನಾಗಿ ಜೋಶಿಯವರನ್ನು ಬದಲಿಸಬೇಕು ಎನ್ನುವ ಬೇಡಿಕೆ ಇಟ್ಟಿದ್ದೆವು. ಆದರೆ ಬಿಜೆಪಿ ನಾಯಕರು ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಅವರನ್ನು ಬದಲಿಸಬೇಕು ಎನ್ನುವ ಹೋರಾಟ ನಮಗೆ ಅನಿವಾರ್ಯ. ನಾವು ಹಿಂದೆ ಘೋಷಿಸಿದ ನಿರ್ಧಾರಕ್ಕೆ ಮಠಾಧೀಶರು ಬದ್ಧವಾಗಿದ್ದೇವೆ. ಈ ಕುರಿತು ಬಹುತೇಕ ನಾಯಕರು ಕರೆ ಮಾಡಿ ಮನೋವಲಿಕೆ, ಮನವಿ, ಬೆದರಿಕೆ ಕೂಡ ಹಾಕಿದ್ದಾರೆ. ಮಾನ ಪ್ರಾಣ ಜೈಲಿಗೆ ಹಾಕುವ ಹೆದರಿಕೆಯೂ ಕೂಡ ಹಾಕಿದ್ದಾರೆ. ಇಂತಹ ಗೊಡ್ಡು ಬೆದರಿಕೆಗಳಿಗೆ ಹೆದರುವಂಥ ಮಠಾಧೀಶ ನಾನಲ್ಲ. ನನ್ನ ನಿರ್ಧಾರ ಸ್ಪಷ್ಟವಾಗಿದ್ದು, ಪ್ರಾಣ ಹೋದರು ಹಿಂಜರಿಯುವ ಪ್ರಶ್ನೆಯೇ ಇಲ್ಲ. ಕೇಂದ್ರ ಸಚಿವ ಬಹಳ ಜೋಶಿ ಅವರಿಗೆ ತಿದ್ದಿಕೊಳ್ಳಲು ಹತ್ತು ವರ್ಷ ಸಮಯ ನೀಡಿದೆವು. ಆದರೆ ಅವರಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಸುತ್ತಲಿನ ಕ್ಷೇತ್ರಗಳನ್ನು ನೋಡಿದಾಗ ಯಾವ ನಾಯಕರು ಇವರಂತೆ ತುಳಿದು ಬೆಳೆದಿಲ್ಲ ಎಂದರು.
ಈಗಾಗಲೇ ರಾಜ್ಯದ ಮಠಾಧೀಶರ ಸಭೆ ಮಾಡಿದ್ದು, ಏಪ್ರಿಲ್ ಎರಡರಂದು ನಮ್ಮ ಭಕ್ತರ ಸಭೆ ಧಾರವಾಡದಲ್ಲಿ ಕರೆದಿದ್ದೇನೆ. ಒಂದು ಭಕ್ತರು ವ್ಯಕ್ತಪಡಿಸುವ ಅಭಿಪ್ರಾಯವನ್ನು ಸಂಗ್ರಹಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಒಂದು ನಡೆಯುವ ಸಭೆಗೆ ನಮ್ಮ ಭಕ್ತರು ಆಗಮಿಸಬೇಕು. ಬೆದರಿಕೆಗಳಿಂದ ಯಾವುದೇ ಮಠಾಧೀಶರನ್ನು ಬದಲಿಸಿದರೂ ನನ್ನನ್ನು ಬದಲಿಸಲು ಸಾಧ್ಯವಿಲ್ಲ. ಇವರಿಂದ ಲಿಂಗಾಯತರಿಗೆ ಅಷ್ಟೇ ಅಲ್ಲ ಬಹಳ ಸಮಾಜಗಳು ತುಳಿತಕ್ಕೆ ಒಳಗಾಗಿವೆ. ಒಂದು ಕ್ಷೇತ್ರಕ್ಕೆ ಒಂದು ಪಕ್ಷದಿಂದ ಒಬ್ಬರನ್ನು ಚುನಾವಣ ತಯಾರಿಗೆ ಕಳುಹಿಸಬಹುದು. ಆದರೆ ಜೋಶಿ ಅವರು ಹಾವೇರಿ ಕ್ಷೇತ್ರಕ್ಕೆ ಮೂರು ಜನರನ್ನು ಕಳುಹಿಸಿದ್ದಾರೆ. ಟಿಕೆಟ್ ನೀಡುವ ಆಮಿಷವೊಡ್ಡಿ ಎಲ್ಲರಿಂದಲೂ ಪಕ್ಷ ಸಂಘಟನೆ ಮಾಡಿಕೊಂಡು ನಂತರ ತಮ್ಮದೇ ಅಜೆಂಡ ಅನುಷ್ಠಾನಗೊಳಿಸಿದ್ದಾರೆ. ಇವರ ಈ ಕುತಂತ್ರಗಾರಿಕೆ ಸಮಾಜ ಮತ್ತು ವ್ಯಕ್ತಿಗಳನ್ನು ತುಳಿಯುವ ಕೆಲಸವಲ್ಲವೇ ಎಂದು ಹರಿಹಾಯ್ದರು.
ಈ ಚುನಾವಣೆಯಲ್ಲಿ ಸ್ಪರ್ಧಿಸುವುದು ಅಥವಾ ಇನ್ನೊಬ್ಬರನ್ನು ಸ್ಪರ್ಧೆಗಿಳಿಸುವ ಅಂತ ಯಾವುದೇ ಯೋಚನೆಗಳು ಇಲ್ಲ. ಅಭ್ಯರ್ಥಿ ಜೋಶಿಯನ್ನು ಬದಲಿಸಬೇಕು ಎಂಬುದೇ ನಮ್ಮ ಒತ್ತಾಯ. ಈ ವಿಚಾರದಲ್ಲಿ ನಮ್ಮ ಹೋರಾಟವಿದೆಯೇ ಹೊರತು ಚುನಾವಣೆ ಸ್ಪರ್ಧೆ ಎಂಬುವುದು ಸುಳ್ಳು. ಜೋಶಿಯವರನ್ನು ಹೊಗಳುತ್ತಿರುವ ಕೆಲವರು ಅವರ ಬಗ್ಗೆ ಅಸಹನೆ ಹೊಂದಿದ್ದಾರೆ. ನನಗೆ ಕರೆ ಮಾಡಿ ಸ್ವಾಮೀಜಿ ನಿಮಗೆ ಒಂದಿಷ್ಟು ಬೈಯುತ್ತೇನೆ ಕ್ಷಮೆ ಇರಲಿ ಎಂದು ಕೇಳಿದವರು ಇದ್ದಾರೆ. ಜೋಶಿಯವರನ್ನು ಬದಲಿಸಬೇಕು ಎಂಬುದು ಕೇವಲ ಲಿಂಗಾಯತ ಸಮಾಜದ ಕೂಗಲ್ಲ ಬಹು ಸಮಾಜಗಳ ಕೂಗು ಎಂದರು.