ಹೊಸದಿಲ್ಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ಕರ್ನಾಟಕದ ಜಲಾಶಯಗಳ ನೀರು ಸಂಗ್ರಹವು ಕೊರತೆಯನ್ನು ಎದುರಿಸುತ್ತಿದೆ ಎಂದು ಕೇಂದ್ರ ಜಲ ಆಯೋಗದ ಬುಲೆಟಿನ್ ಹೇಳಿದೆ. ಕಳೆದ 10 ವರ್ಷಗಳ ಸರಾಸರಿಯಲ್ಲೂ ಇದು ಅತೀ ಹೆಚ್ಚು ಕೊರತೆಯಾಗಿದೆ. ಅಲ್ಲದೇ ದೇಶದ ಒಟ್ಟು 150 ಜಲಾಶಯಗಳ ಲೈವ್ ಸ್ಟೋರೇಜ್ ಶೇ.36ಕ್ಕೆ ಇಳಿಕೆಯಾಗಿದೆ ಎಂದು ಆಯೋಗ ಹೇಳಿದೆ.
ಕಳೆದ ವರ್ಷದಲ್ಲಿ ಮಳೆ ಅಭಾವ, ಹೆಚ್ಚುತ್ತಿರುವ ನಗರೀಕರಣದಿಂದಾಗಿ ಕೆರೆಗಳು ನಾಶವಾದ ಪರಿಣಾಮ ಬೆಂಗಳೂರು ನೀರು ಕೊರತೆಯಿಂದ ಭಾರೀ ಸಮಸ್ಯೆ ಎದುರಿಸುತ್ತಿದೆ.
150 ಜಲಾಶಯಗಳ ಒಟ್ಟು ಲೈವ್ ಸ್ಟೋರೇಜ್ ಸಾಮರ್ಥ್ಯವು 178 ಬಿಸಿಎಂ (ಬಿಲಿಯನ್ ಕ್ಯೂಬಿಕ್ ಮೀಟರ್ಸ್) ಆಗಿದ್ದು, ಇದು 257.812 ಬಿಸಿಎಂ ಲೈವ್ ಸ್ಟೋರೇಜ್ ಸಾಮರ್ಥ್ಯದ ಸುಮಾರು ಶೇ.69.35ರಷ್ಟು ಎಂದು ಗುರುವಾರ ಬಿಡುಗಡೆ ಮಾಡಲಾದ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ. ಈ ಜಲಾಶಯಗಳಲ್ಲಿ 64.606 ಬಿಸಿಎಂ ಇದ್ದು, ಅದು ಒಟ್ಟು ಲೈವ್ ಸ್ಟೋರೇಜ್ ಸಾಮರ್ಥ್ಯದ ಶೇ.36ರಷ್ಟಾಗಿದೆ. ಅಂದರೆ ಈ ಜಲಾಶಯಗಳಲ್ಲಿ ಈಗ ಶೇ.36ರಷ್ಟು ನೀರಿದೆ. ಕಳೆದ 10 ವರ್ಷಗಳಲ್ಲಿ ಈ ಲೈವ್ ಸ್ಟೋರೇಜ್ ಸರಾಸರಿ ಸಾಮರ್ಥ್ಯವು 66.644 ಬಿಸಿಎಂ ಎಂದು ತಿಳಿಸಿದೆ.