ಹೊಸದಿಲ್ಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಾರಿಯಾಗಿರುವ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯನ್ನು ಪತ್ತೆಹಚ್ಚಿ ವರದಿ ಮಾಡುವುದಕ್ಕೆ ದೇಶದ ಪ್ರಜೆಗಳೇ ಮುಂದಾಗಿದ್ದಾರೆ. ಚುನಾವಣೆ ಆಯೋಗದ (ಇ.ಸಿ) ಸಿ-ವಿಜಿಲ್ ಆಯಪ್ ಈ ಅಪರಾಧ ಪತ್ತೆಗೆ ಜನರ ಕೈಯಲ್ಲಿರುವ ಪ್ರಮುಖ ಅಸ್ತ್ರವಾಗಿ ಮಾರ್ಪಟ್ಟಿದೆ.
ಇದರ ಮೂಲಕ ಈಗಾಗಲೇ ಬರೋಬ್ಬರಿ 79,000 ದೂರುಗಳು ದಾಖಲಾಗಿವೆ.
ಹೌದು, ಚುನಾವಣೆ ಆಯೋಗವು ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳನ್ನು ನಾಗರಿಕರೇ ದಾಖಲಿಸಲು ಅನುವಾಗುವಂತೆ ಸಿ-ವಿಜಿಲ್ ಎನ್ನುವ ಮೊಬೈಲ್ ಆಯಪ್ ಅನ್ನು ಅಭಿವೃದ್ಧಿಪಡಿಸಿದೆ. ಇದೇ ಆಯಪ್ಲಿಕೇಶನ್ ಮೂಲಕ ಮಾದರಿ ನೀತಿ ಸಂಹಿತೆ ಜಾರಿ ಆದಾಗಿನಿಂದ ಈವರೆಗೆ 79,000 ದೂರುಗಳು ದಾಖಲಾಗಿವೆ ಎಂದು ಚುನಾವಣೆ ಆಯೋಗವೇ ಮಾಹಿತಿ ನೀಡಿದೆ. ಈ ಪೈಕಿ ಶೇ.99ರಷ್ಟು ದೂರುಗಳನ್ನು ಈಗಾಗಲೇ ಪರಿಶೀಲಿಸಿ ಬಗೆಹರಿಸಲಾಗಿದೆ. ಅದರಲ್ಲಿಯೂ ಶೇ.89ರಷ್ಟು ದೂರುಗಳನ್ನು 100 ನಿಮಿಷಗಳ ಒಳಗಾಗಿ ಬಗೆಹರಿಸಲಾಗಿದೆ ಎಂದು ಚುನಾವಣೆ ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ದಾಖಲಾದ ದೂರುಗಳ ಪೈಕಿ 58,500 ದೂರುಗಳು ಕಾನೂನುಬಾಹಿರವಾಗಿ ಬ್ಯಾನರ್‌ಗಳನ್ನು ಹಾಕಿದ್ದಕ್ಕೆ ಸಂಬಂಧಿಸಿದೆ. 1,400 ದೂರುಗಳು ಹಣ, ಉಡುಗೊರೆ ಮತ್ತು ಮದ್ಯ ವಿತರಣೆಗೆ ಸಂಬಂಧಿಸಿದ್ದಾಗಿದೆ. 2,454 ದೂರುಗಳು ಪ್ರಚಾರಕ್ಕಾಗಿ ಸಾರ್ವಜನಿಕ ಸ್ಥಳಗಳನ್ನು ವಿರೂಪಗೊಳಿಸಿದ್ದಕ್ಕೆ ಸಂಬಂಧಿಸಿವೆ. 535 ಪ್ರಕರಣಗಳನ್ನು ಮತಹಾಕುವಂತೆ ಬೆದರಿಸಿದ್ದಕ್ಕಾಗಿ ದಾಖಲಿಸಲಾಗಿದೆ. ಈ ಪೈಕಿ 529 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಇನ್ನು 1000 ಪ್ರಕರಣಗಳು ಅವಧಿ ಮೀರಿ ಸ್ಪೀಕರ್‌ಗಳ ಬಳಕೆಗೆ ಸಂಬಂಧಿಸಿದ್ದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.