ಬೆಂಗಳೂರು,ಮಾ.23- ನೀರಿನ ಕೊರತೆ ಕುಕ್ಕುಟೋದ್ಯಮದ ಮೇಲೂ ಪ್ರಭಾವ ಬೀರಿರುವುದರಿಂದ ಕೋಳಿ ದರ ದುಪ್ಪಾಟ್ಟಾಗಿದೆ. ಹೀಗಾಗಿ ಚಿಕನ್ ಪ್ರಿಯರು ದುಬಾರಿ ಬೆಲೆ ನೀಡಿ ಚಿಕನ್ ಖರೀದಿಸುವುದು ಅನಿವಾರ್ಯವಾಗಿದೆ. ಮಳೆ ಕೊರತೆಯಿಂದ ಕೋಳಿ ಆಹಾರಗಳಾದ ಸೋಯಾ, ಮೈಸ್ ಮತ್ತಿತರ ಫಸಲುಗಳ ಪ್ರಮಾಣ ಕುಸಿತಗೊಂಡಿರುವುದರಿಂದ ಕೋಳಿ ದರ ಏರಿಕೆಯಾಗಿದೆ.
ಒಂದು ಕೆ.ಜಿಗೆ 100 ರಿಂದ 150ರೂ ಇದ್ದ ಕೋಳಿ ಬೆಲೆ ಇದೀಗ 300 ರೂ.ಗಳಿಗೆ ಏರಿಕೆಯಾಗಿದೆ. ಬೆಲೆ ಹೆಚ್ಚಳದ ಬಗ್ಗೆ ತಿಳಿಯದೆ ಚಿಕನ್ ಕೊಳ್ಳಲು ಹೋದವರಿಗೆ ಡಬಲ್ ಬೆಲೆ ಏರಿಕೆಯ ಬಿಸಿ ಮುಟ್ಟಿದೆ.
ರಾಜ್ಯದಲ್ಲಿ 35 ರಿಂದ 40 ಸಾವಿರ ಮಂದಿ ಕೋಳಿ ಸಾಕಾಣಿಕೆದಾರರಿದ್ದು ಪ್ರತೀ ವಾರ 80 ಲಕ್ಷ ಕೋಳಿ ಉತ್ಪಾದನೆ ಮಾಡ್ತಾರೆ ಪ್ರತೀ ಕೆಜಿ ಕೋಳಿ ಉತ್ಪಾದನೆಗೆ ಹಿಂದೆ 60ರಿಂದ 70 ರೂಪಾಯಿ ಖರ್ಚಾಗುತ್ತಿತ್ತು. ಆದ್ರೀಗ ಪ್ರತೀ ಕೆಜಿ ಕೋಳಿ ಉತ್ಪಾದನೆಗೆ 98 ರಿಂದ 100 ರೂಪಾಯಿ ಖರ್ಚಾಗುತ್ತಿದೆಯಂತೆ.ಇದರಿಂದ ಮಾರುಕಟ್ಟೆಯಲ್ಲಿ ಕೋಳಿಗೆ ಭಾರಿ ಡಿಮ್ಯಾಂಡ್ ಕಂಡುಬಂದಿದೆ. ಹೀಗಾಗಿ 300 ರೂ. ನೀಡಿದರೂ ಕೋಳಿ ಸಿಗೋದು ಅನುಮಾನವಾಗಿದೆ. ನೆರೆ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರದಲ್ಲಿ ಕೋಳಿ ಉತ್ಪಾದನೆ ಕುಸಿತವಾಗಿರುವುದರಿಂದ ಅಲ್ಲಿಯೂ ಕೂಡ ಕೋಳಿ ಬೇಡಿಕೆ ಜಾಸ್ತಿ ಇದೆ, ಹೀಗಾಗಿ ಮತ್ತಷ್ಟು ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.