ನವದೆಹಲಿ: ದೆಹಲಿ ಅಬಕಾರಿ ನೀತಿ (Delhi Liquor Case) ಪ್ರಕರಣದಲ್ಲಿ ಜಾರಿನಿರ್ದೇಶನಾಲಯ (Enforcement Directorate) ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ರನ್ನು (Arvind Kejriwal) ಗುರುವಾರ ಬಂಧಿಸಿದೆ. ಅವರ ಮನೆಯಲ್ಲಿ ಎರಡು ಗಂಟೆ ವಿಚಾರಣೆ ನಡೆಸಿದ ನಂತರ ಅವರನ್ನ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.ಈ ಮೂಲಕ ಈ ಪ್ರಕರಣದಲ್ಲಿ ಬಂಧಿತರಾದ ಎಎಪಿಯ 4ನೇ ನಾಯಕರಾಗಿದ್ದಾರೆ. ಇನ್ನು ಇಡಿ ಕೇಜ್ರಿವಾಲ್ರನ್ನು ಬಂಧಿಸಿದ ನಂತರ ದೆಹಲಿ ಮುಖ್ಯಮಂತ್ರಿಯಾಗಿ (Delhi CM) ಮುಂದುವರಿಯಲಿದ್ದಾರೆ. ಸೆರಮನೆಯಲ್ಲಿದ್ದುಕೊಂಡೇ ಆಡಳಿತ ನಡೆಸುತ್ತಾರೆ ಎಂದು ಆಮ್ ಆದ್ಮಿ ಪಕ್ಷದ (AAP) ನಾಯಕಿ ಹಾಗೂ ಸಚಿವೆ ಅತಿಶಿ ತಿಳಿಸಿದ್ದಾರೆ.
ಜೈಲಿನಿಂದಲೇ ಸರ್ಕಾರ
ಇಡಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದೆ ಎಂಬ ಸುದ್ದಿ ಬಂದಿದೆ. ಅರವಿಂದ್ ಕೇಜ್ರಿವಾಲ್ ಈಗಲೂ, ಮುಂದೆಯೂ ದೆಹಲಿ ಮುಖ್ಯಮಂತ್ರಿಯಾಗಿ ಇರುತ್ತಾರೆ. ಅಗತ್ಯವಿದ್ದರೆ ಜೈಲಿನಿಂದಲೇ ಸರ್ಕಾರ ನಡೆಸುತ್ತಾರೆ. ಈ ವಿಷಯವನ್ನು ನಾವು ಬಹಳ ಹಿಂದಿನಿಂದಲೂ ಹೇಳುತ್ತಲೇ ಇದ್ದೇವೆ. ಹಾಗೆ ಮಾಡುವುದನ್ನು ತಡೆಯುವ ಯಾವುದೇ ಕಾನೂನು ಇಲ್ಲ. ಏಕೆಂದರೆ ಅವರಿಗೆ ಇನ್ನೂ ಶಿಕ್ಷೆಯಾಗಿಲ್ಲ ಎಂದು ಆಪ್ ಸರ್ಕಾರದಲ್ಲಿ 2ನೇ ನಾಯಕಿಯಾಗಿ ಗುರುತಿಸಿಕೊಂಡಿರುವ ಅತಿಶಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ಬಂಧನ ಖಂಡಿಸಿ ಪ್ರಕರಣ ದಾಖಲಿಸಿದ್ದೇವೆ. ನಮ್ಮ ವಕೀಲರು ಸುಪ್ರೀಂ ಕೋರ್ಟ್‌ಗೆ ಹೋಗುತ್ತಿದ್ದಾರೆ. ಇಂದು ರಾತ್ರಿ ಸುಪ್ರೀಂ ಕೋರ್ಟ್‌ನಿಂದ ತಕ್ಷಣ ವಿಚಾರಣೆಗೆ ನಾವು ಒತ್ತಾಯಿಸುತ್ತೇವೆ ಎಂದರು.
ಮೋದಿಗೆ ಕೇಜ್ರಿವಾಲ್ ಕಂಡರೆ ಭಯ
ಕೇಜ್ರಿವಾಲ್ ಮೋದಿ ಸರ್ಕಾರಕ್ಕೆ ಹೆದರುವುದಿಲ್ಲ. ದೇಶವನ್ನು ಉಳಿಸಲು ಭಗತ್ ಸಿಂಗ್ ನಗುತ್ತಲೇ ನೇಣಿಗೆ ಶರಣಾಗಲು ಒಪ್ಪಿಕೊಂಡಿದ್ದರು. ಈಗ ಸರ್ವಾಧಿಕಾರಿ ಮೋದಿಯಿಂದ ದೇಶವನ್ನು ಮುಕ್ತಗೊಳಿಸಲು ಅರವಿಂದ್ ಕೇಜ್ರಿವಾಲ್ ಕೂಡ ತಲೆಗೆ ಬಟ್ಟೆ ಕಟ್ಟಿಕೊಂಡು ಸಿದ್ಧರಾಗಿದ್ದಾರೆ. ಇಂತಹದ್ದಕ್ಕೆಲ್ಲಾ ದೇಶಭಕ್ತ ಕೇಜ್ರಿವಾಲ್ ಹೆದರುವುದಿಲ್ಲ ಎಂದು ತಿಳಿಸಿದ್ದಾರೆ.
ದೆಹಲಿ ಪೊಲೀಸರು ಎಎಪಿ ಶಾಸಕರಾದ ಜರ್ನೈಲ್ ಸಿಂಗ್, ರುತುರಾಜ್ ಝಾ, ಜೈ ಭಗವಾನ್, ಅಬ್ದುಲ್ ರೆಹಮಾನ್ ಅವರನ್ನು ಬಂಧಿಸಿದ್ದಾರೆ. ಈ ಬಂಧನಗಳಿಗೆ ನಾವು ಹೆದರುವುದಿಲ್ಲ, ಕೊನೆಯುಸಿರು ಇರುವವರೆಗೂ ಸರ್ವಾಧಿಕಾರದ ವಿರುದ್ಧ ಹೋರಾಡುತ್ತೇವೆ ಎಂದು ತಿಳಿಸಿದ್ದಾರೆ.