ನವದೆಹಲಿ: ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದ ಅಂಕಿ-ಅಂಶಗಳ ಸಹಿತ ಸಂಪೂರ್ಣ ಮಾಹಿತಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ (ಮಾರ್ಚ್ 21) ಸುಪ್ರೀಂಕೋರ್ಟ್ ಆದೇಶದಂತೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವುದಾಗಿ ತಿಳಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದಂತೆ ತನ್ನಲ್ಲಿರುವ ಎಲ್ಲಾ ವಿವರಗಳನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವುದಾಗಿ ಸ್ಟೇಟ್ ಬ್ಯಾಂಕ್ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ ಸುಪ್ರೀಂಗೆ ಸಲ್ಲಿಸಿರುವ ಅಫಿಡವಿತ್ ನಲ್ಲಿ ಮಾಹಿತಿ ನೀಡಿದೆ.
ಈ ಮೊದಲು ಎಸ್ ಬಿಐ ಸಲ್ಲಿಸಿದ ಮಾಹಿತಿಯಲ್ಲಿ ಬಾಂಡ್ ಖರೀದಿದಾರರ ಹೆಸರು, ಯಾವ ಪಕ್ಷದ ಬಾಂಡ್ ಖರೀದಿಸಿದ್ದಾರೆ ಎಂಬ ಮಾಹಿತಿ ಇಲ್ಲವಾಗಿತ್ತು. ಇದೀಗ ಇಂದು ಬ್ಯಾಂಕ್ ಖಾತೆ ಸಂಖ್ಯೆ ಮತ್ತು ರಾಜಕೀಯ ಪಕ್ಷಗಳ ಕೆವೈಸಿ ವಿವರ ಹಾಗೂ ಖರೀದಿದಾರರ ಮಾಹಿತಿಯನ್ನು ಒದಗಿಸಿರುವುದಾಗಿ ಮೂಲಗಳು ತಿಳಿಸಿವೆ.