ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಪಾಲಿಗೆ ಬಾಕಿ ಉಳಿದಿರುವ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ವರಿಷ್ಠರಿಗೂ ತಲೆಬಿಸಿ ಸೃಷ್ಟಿಸಿದೆ. ಬೆಳಗಾವಿಯಲ್ಲಿ ಎದುರಾಗಿರುವ ಪ್ರತಿರೋಧದ ಬಿಸಿಯಿಂದ ಜಗದೀಶ್ ಶೆಟ್ಟರ್ ದಿಗಿಲುಗೊಂಡಿ ದ್ದಾರೆ. ಇದೆಲ್ಲದರ ಮಧ್ಯೆ ಒಂದು ಕ್ಷೇತ್ರದ ಟಿಕೆಟ್ ಬದಲಾಗಬಹುದೆಂಬ ಚರ್ಚೆ ಬಿಜೆಪಿ ವಲಯದಲ್ಲಿ ಬಲವಾಗಿದ್ದು, ಬುಧವಾರ ಪ್ರಧಾನಿ ನೇತೃತ್ವದಲ್ಲಿ ನಡೆ ಯುವ ಕೇಂದ್ರೀಯ ಚುನಾವಣ ಸಮಿತಿ (ಸಿಇಸಿ) ಸಭೆಯಲ್ಲಿ ಎಲ್ಲ ಕುತೂಹಲಗಳಿಗೂ ತೆರೆ ಬೀಳಬಹುದು ಎಂದು ನಿರೀಕ್ಷಿಸಲಾಗಿದೆ.
ಸಿಇಸಿಗೆ ಪೂರ್ವಭಾವಿಯಾಗಿ ನಡೆಯುವ ಪ್ರಮುಖರ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ಮಂಗಳವಾರ ದಿಲ್ಲಿಗೆ ತೆರಳಿದ್ದು, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತಿತರ ಪ್ರಮುಖರ ಜತೆಗೆ ಚರ್ಚೆ ನಡೆಸಿದ್ದಾರೆ. ಇದೆಲ್ಲದರ ಮಧ್ಯೆ ದಿಲ್ಲಿಯಲ್ಲಿ ಬಿಡಾರ ಹೂಡಿ ಟಿಕೆಟ್ ವಿಷಯದಲ್ಲಿ ವರಿಷ್ಠರ ಜತೆಗೆ ಸಮಾಲೋಚನೆಗೆ ಅಪೇಕ್ಷಿಸು ತ್ತಿದ್ದ ಜಗದೀಶ್ ಶೆಟ್ಟರ್, ಸುಮಲತಾ ಅಂಬರೀಶ್ ರಾಜ್ಯದತ್ತ ಮುಖ ಮಾಡಿದ್ದಾರೆ.
ಬಾಕಿ ಇರುವ ಐದರ ಪೈಕಿ ರಾಯಚೂರು, ಚಿಕ್ಕಬಳ್ಳಾಪುರ ಹಾಗೂ ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿ ಹೆಸರು ಮಾತ್ರ ಪ್ರಕಟವಾಗುವ ಸಾಧ್ಯತೆ ಇದ್ದು, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯ ಅಭ್ಯರ್ಥಿಗಳನ್ನು ಅಂತಿಮಗೊಳಿಸದೆ ಕೆಲವು ದಿನ ಕಾದುನೋಡುವ ಸಾಧ್ಯತೆ ಇದೆ.
ಇವೆಲ್ಲದರ ಮಧ್ಯೆ ಬೆಳಗಾವಿ ಲೋಕಸಭಾ ಕ್ಷೇತ್ರ ಪ್ರವೇಶಕ್ಕೆ ತಮಗೆ ಎದುರಾಗುತ್ತಿರುವ ವಿರೋಧ
ವನ್ನು ಕಂಡು ಮಾಜಿ ಸಿಎಂ ಜಗದೀಶ್ ಶೆಟ್ಟರ್ ದಿಗಿಲುಗೊಂಡಿದ್ದಾರೆ. ಒಂದು ಕಡೆ ಸ್ಥಳೀಯ ನಾಯಕರ ವಿರೋಧ, ಇನ್ನೊಂದೆಡೆ ಪಂಚಮಸಾಲಿ ವಿವಾ ದದ ಹಿನ್ನೆಲೆಯಲ್ಲಿ ಸ್ಪರ್ಧೆಗೆ ಶೆಟ್ಟರ್ ಹಿಂದಡಿ ಇರಿಸುತ್ತಿದ್ದು, ದಿಲ್ಲಿಗೆ ತೆರಳಿ ವರಿಷ್ಠರಿಗೆ ಈ ವಿಚಾರವನ್ನು ತಲುಪಿಸುವ ಪ್ರಯತ್ನ ನಡೆಸಿದ್ದಾರೆ. ಇತ್ತ ಬೆಳಗಾವಿಯ ನಿಯೋಗ ಬೆಂಗಳೂರಿಗೆ ಬಂದು ಚುನಾವಣ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಅವರನ್ನು ಭೇಟಿ ಮಾಡಿ ಶೆಟ್ಟರ್ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಿದ್ದರೂ ಶೆಟ್ಟರ್ ಅವರನ್ನು ಬೆಳಗಾವಿ ಯಿಂದಲೇ ಕಣಕ್ಕಿಳಿಸುವುದಕ್ಕೆ ಯಡಿಯೂರಪ್ಪ ಉತ್ಸುಕರಾಗಿದ್ದಾರೆ ಎಂದು ತಿಳಿದು ಬಂದಿದೆ.
ಶೆಟ್ಟರ್ ಹಾಗೂ ಈಶ್ವರಪ್ಪ ಪೈಕಿ ಒಬ್ಬರ ವಿವಾದವನ್ನು ಬಗೆಹರಿಸುವುದಕ್ಕಾಗಿ ಒಂದು ಕ್ಷೇತ್ರದ ಅಭ್ಯರ್ಥಿ ಬದಲಾವಣೆಗೆ ವರಿಷ್ಠರು ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಸಂಸದೀಯ ಮಂಡಳಿಯಲ್ಲಿ ಅಂಗೀಕಾರಗೊಂಡ ಹೆಸರನ್ನು ಬದಲಾಯಿಸಿದ ಉದಾಹರಣೆ ಬಿಜೆಪಿಯಲ್ಲಿ ಇದುವರೆಗೆ ಇಲ್ಲ. ಹೀಗಾಗಿ ಈ ವದಂತಿ ಎಷ್ಟು ನಿಜ ಎಂದು ತಿಳಿಯುವುದಕ್ಕೂ ಬುಧವಾರ ರಾತ್ರಿಯ ವರೆಗೆ ಕಾಯುವುದು ಅನಿವಾರ್ಯವಾಗಿದೆ.