ಬೆಳಗಾವಿ: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧ ಜೈಲು ಸೇರಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ದೀಪಾವಳಿ ಹಬ್ಬದ ಸಂಭ್ರಮವಿಲ್ಲ. ಆದರೂ ಜೈಲಿನಿಂದಲೇ ಸಾರ್ವಜನಿಕರಿಗೆ ಶುಭಾಶಯ ತಿಳಿಸಿದ್ದಾರೆ.
ಈ ಸಂಬಂಧ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಶನಿವಾರ ಬರೆದುಕೊಂಡಿರುವ ಅವರು, ದೀಪಾವಳಿಯ ದೀಪವು ನಮ್ಮೆಲ್ಲಾ ತೊಂದರೆಗಳನ್ನು, ಸಮಸ್ಯೆಗಳನ್ನು ಮತ್ತು ದುಃಖಗಳನ್ನು ಸುಡಲಿ. ಈ ಅದ್ಭುತ ದೀಪಾವಳಿಯಿಂದ ನಮ್ಮೆಲ್ಲರ ಜೀವನದಲ್ಲಿ ಸಂತೋಷ, ಸಂಭ್ರಮ, ಸಡಗರ ಮನೆ ಮಾಡಲಿ. ಸಮಸ್ತ ನಾಗರೀಕ ಬಂಧುಗಳಿಗೆ ನರಕ ಚತುರ್ದಶಿಯ ಶುಭಾಶಯಗಳು ಎಂದು ತಿಳಿಸಿದ್ದಾರೆ.
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ವಿನಯ್ ಕುಲಕರ್ಣಿಯನ್ನು ನವೆಂಬರ್ 23ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಾಜಿ ಸಚಿವರು ಹಿಂಡಲಗಾ ಜೈಲಿನ ಕ್ವಾರಂಟೈನ್ ಸೆಲ್‍ನಲ್ಲಿದ್ದು, ಸೆಲ್‍ನಲ್ಲೇ ಅತ್ತಿಂದಿತ್ತ ನಡೆದಾಡುತ್ತ ಕಾಲ ಕಳೆಯುತ್ತಿದ್ದಾರೆ.