ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಸಮೀಪದ ತೋಗರ್ಸಿ ಬಳಿ, ಶಿವಮೊಗ್ಗದ ಯುವಕನೋರ್ವನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ತಡರಾತ್ರಿ ನಡೆದಿದ್ದು, ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಶಿವಮೊಗ್ಗದ ಗಾಡಿಕೊಪ್ಪದ ಮೈಸೂರು ಬೀದಿ ನಿವಾಸಿ ವೀರೇಶ್ (27) ಹತ್ಯೆಗೀಡಾದ ಯುವಕ ಎಂದು ಹೇಳಲಾಗಿದ್ದು, ತೋಗರ್ಸಿ ಹೊರವಲಯದ ಸ್ಮಶಾನದ ಬಳಿ ಈ ಘಟನೆ ನಡೆದಿದೆ.

ಆತ ಕೊಂಡೊಯ್ದ ಇನ್ನೋವಾ ಕಾರಿನ ಡಿಕ್ಕಿಯಲ್ಲಿ, ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಹಂತಕರು ಕಾರಿಗೆ ಬೆಂಕಿ ಹಚ್ಚಿ ಸುಟ್ಟಿರುವುದರಿಂದ ದೇಹ ಸಂಪೂರ್ಣ ಸುಟ್ಟು ಕರಕಲಾಗಿದೆ.
ರಾತ್ರಿ ಗಾಡಿಕೊಪ್ಪದ ಮನೆಯಲ್ಲಿದ್ದ ಯುವಕನಿಗೆ, ಕೆಲ ಪರಿಚಿತರು ಆತನ ಮೊಬೈಲ್ ಫೋನ್ ಗೆ ಕರೆ ಮಾಡಿದ್ದರು. ಸ್ನೇಹಿತರೋರ್ವರ ಇನ್ನೋವಾ ಕಾರಿನಲ್ಲಿ ವೀರೇಶ್ ತೆರಳಿದ್ದರು. ನಂತರ ಮನೆಗೆ ಹಿಂದಿರುಗಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಶಿಕಾರಿಪುರ ಡಿವೈಎಸ್‌ಪಿ ಕೇಶವ್, ಇನ್ಸ್ ಪೆಕ್ಟರ್ ರುದ್ರೇಶ್, ಶಿರಾಳಕೊಪ್ಪ ಠಾಣೆ ಸಬ್ ಇನ್ಸ್’ಪೆಕ್ಟರ್ ರಮೇಶ್ ಮತ್ತವರ ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದು ಬರಬೇಕಾಗಿದೆ.
Laxmi News 24×7